ದಾಲ್ಚಿನ್ನಿ : ದರಮಾನವೇ ಶಾಪವಾಯ್ತು.
ಸಾಂಬಾರ ಪದಾರ್ಥಗಳ ಸಾಲಿನಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವ ದಾಲ್ಚಿನ್ನಿಗೇಕೆ ಇಂಥ ಶನಿದೆಸೆ ಪ್ರಾರಂಭವಾಗಿದೆಯೋ ಗೊತ್ತಿಲ್ಲ. ತಲೆತಲಾಂತರದಿಂದ ಔಷಧಿಗಾಗಿ, ಮಸಾಲೆ ಪದಾರ್ಥದ ರೂಪದಲ್ಲಿ ಮಾನವನ ನಿತ್ಯ ಬದುಕಿನಲ್ಲಿ ಬಳಕೆಯಾಗುವ ದಾಲ್ಚಿನ್ನಿ, ಪಶ್ಚಿಮ ಘಟ್ಟದ ಕಾಡುಗಳಲ್ಲಿ ಪೊದೆಯಂತೆ ಬೆಳೆಯುತ್ತಿದ್ದ ದಾಲ್ಚಿನ್ನಿ ಮತ್ತು ಇದರ ಇತರ ಪ್ರಬೇಧಗಳು ಹೇಳಹೆಸರಿಲ್ಲದಂತೆ ನಿನರ್ಾಮವಾಗುತ್ತಿದೆ. ಆರೈಕೆ ಬೇಡದ, ತನ್ನ ಪಾಡಿಗೆ ತಾನು ಮುಗಿಲೆತ್ತರ ಬೆಳೆದು ನಿಲ್ಲುವ ದಾಲ್ಚಿನ್ನಿಗೆ ಇತ್ತೀಚಿನ ದಿನಗಳಲ್ಲಿ ದರಮಾನವೇ ಶಾಪವಾಗಿ ಪರಿಣಮಿಸುತ್ತಿರುವದು ಕಹಿ ಸತ್ಯ. ಒಂದಲ್ಲ ಒಂದು ರೀತಿಯಲ್ಲಿ ಮಾನವನಿಗೆ
ಉಪಯುಕ್ತವಾಗಿರುವ ದಾಲ್ಚಿನ್ನಿ ಮರಗಳು ಇಂದು ಲಾಭ- ನಷ್ಟಗಳ ಲೆಕ್ಕಾಚಾರದ ನಡುವೆ ಸಿಲುಕಿ ಬದುಕು ಕಳೆದುಕೊಳ್ಳುತ್ತಿದೆ.
`ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ' ಎಂಬ ಮಾತೊಂದಿದೆ.ಅಂತೆಯೇ ದಾಲ್ಚಿನ್ನಿ ಮರಗಳು ಕೂಡ. ಈ ಮರದ ಪ್ರತಿಯೊಂದು ಭಾಗವೂ
ಉಪಯುಕ್ತವೇ. ಎಲೆಯಾಗಲೀ, ಮೊಗ್ಗಾಗಲೀ, ತೊಗಟೆಯಾಗಲೀ, ಯಾವುದೂ ಕೂಡ ನಿರುಪಯುಕ್ತವೆನ್ನುವಂತಿಲ್ಲ. ಮಾರುಕಟ್ಟೆಯಲ್ಲಿ ಈ ಮರದ ಯಾವುದೇ ಭಾಗವನ್ನು ಮಾರಿದರೂ ಉತ್ತಮವಾದ ದರವಿದೆ. ಒಣಗಿದ ತೊಗಟೆಗಂತೂ ಬಂಗಾರದ ಬೆಲೆ.
ಸಸ್ಯಶಾಸ್ತ್ರೀಯವಾಗಿ ಹೇಳಬೇಕೆಂದರೆ ದಾಲ್ಚಿನ್ನಿ ಲ್ಯಾರೇಸಿಯ ಕುಟುಂಬಕ್ಕೆ ಸೇರಿದ ಹೂ ಬಿಡುವ ಸಸ್ಯ. ವಿಜ್ಞಾನಿಗಳು ಸಿನ್ನಮೋಮಂ ವೆರಮ್ ಎನ್ನುತ್ತಾರೆ. ಹಲವಾರು ಪ್ರಭೇದಗಳೂ ಗುರುತಿಸಲ್ಪಟ್ಟಿವೆ. ದಾಲ್ಚಿನ್ನಿಯ ಹೂವರಳಿ ಕಾಯಿಕಟ್ಟುವ ಹಂತದಲ್ಲಿ ಲವಂಗದಂತೆ ಗೋಚರಿಸುತ್ತದೆ. ಅಲ್ಲದೆ ಲವಂಗದಂತೆಯೇ ಪರಿಮಳವನ್ನೂ ಹೊಂದಿರುತ್ತದೆ. ಒಣಗಿದ ಎಲೆ ಹಾಗೂ ಒಣಗಿದ ತೊಗಟೆ ಮಸಾಲೆ ಪದಾರ್ಥದಂತೆ ಹೇರಳವಾಗಿ ಬಳಕೆಯಾಗುತ್ತದೆ. ಎಷ್ಟರ ಮಟ್ಟಿಗೆ ಎಂದರೆ, ಗರಂ ಮಸಾಲೆ, ಮಾಂಸಾಹಾರಿ ತಿನಿಸುಗಳು, ಪಲಾವ್, ಚಿತ್ರಾನ್ನ ಮುಂತಾದವುಗಳಲ್ಲಿ ಈ ಎಲೆ ಇಲ್ಲವೆಂದರೆ ರುಚಿಯೇ ಇಲ್ಲ. ಹಾಗೂ ಇದರ ಎಲೆ,ತೊಗಟೆಗಳನ್ನು ಭಟ್ಟಿ ಇಳಿಸಿ ಎಣ್ಣೆಯನ್ನೂ ತಯಾರಿಸಲಾಗುತ್ತದೆ. ಈ ಎಲ್ಲಾ ಉತ್ಪನ್ನಗಳಿಗೂ ಮಾರುಕಟ್ಟೆಯಲ್ಲಿ ಯಾವುದೇ ಸಮಯದಲ್ಲೂ ಉತ್ತಮವಾದ ದರವಿರುತ್ತದೆ. ಪ್ರಸ್ತುತ ದರಮಾನವೇ ದಾಲ್ಚಿನ್ನಿ ಸಸ್ಯವರ್ಗಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಹೀಗಾಗಿ ಇಂಥ ದಾಲ್ಚಿನ್ನಿ ಹೇರಳವಾಗಿ ಬೆಳೆಯುತ್ತಿದ್ದ ಉತ್ತರ ಕನ್ನಡ, ಶಿವಮೊಗ್ಗ ಮುಂತಾದ ಪ್ರದೇಶಗಳ ಬುಡಕಟ್ಟು ಹಾಗೂ ಅರಣ್ಯ ಆಶ್ರಯಿತ ಜನಾಂಗಗಳ ಉತ್ತಮ ಆದಾಯದ ಮೂಲವೂ ಹೌದು. ದಾಲ್ಚಿನ್ನಿ ಮೊಗ್ಗಿಗೆ ಸರಾಸರಿ ದರಮಾನ ಪ್ರತೀ ಕೆ.ಜಿ.ಗೆ 500ರೂ ಇರುತ್ತದೆಯಾದ್ದರಿಂದ ಶತ್ರುಗಳ ಕಾಟ ವಿಪರೀತವಾಗಿದೆ.
ಅಸಮರ್ಪಕ ಸಂಗ್ರಹ ರೀತಿ : ದಾಲ್ಚಿನ್ನಿ ಮರದ ಯಾವುದೇ ಉತ್ಪನ್ನವನ್ನು ಸಂಗ್ರಹಿಸಿ ಮಾರಾಟ ಮಾಡಲು ಅರಣ್ಯ ಇಲಾಖೆಯಿಂದ ಅಧಿಕೃತ ಪರವಾನಿಗೆಯನ್ನು ಪಡೆದು ಅವರು ತಿಳಿಸಿದ ರೀತಿಯಲ್ಲೇ ಸಂಗ್ರಹಿಸಬೇಕಾಗುತ್ತದೆ. ಆದರೆ, ಹಲವರು ದುರಾಸೆಯಿಂದ ಮರದ ಬುಡಕ್ಕೇ ಕೊಡಲಿಪೆಟ್ಟು ಹಾಕುತ್ತಿದ್ದಾರೆ. ಸೂಕ್ಷ್ಮ ಮತ್ತು ಮೃದು ಜಾತಿಯ ಮರವಾದ ದಾಲ್ಚಿನ್ನಿ ಒಂದು ಕೊಂಬೆಯನ್ನು ಕಡಿದರೂ ಚೇತರಿಸಿಕೊಂಡು ಚಿಗುರಲು ಹಲವು ವರ್ಷಗಳೇ ಬೇಕು. ಹಾಗಿರುವಾಗ, ಮನಬಂದಂತೆ ಕಡಿದರೆ ಅದು ಎಂದಿಗೂ ಚೇತರಿಸಿಕೊಳ್ಳಲು ಸಾಧ್ಯವಿಲ್ಲ.
![]() |
internet photo |
ಅರಣ್ಯ ಇಲಾಖೆಯ ನಿರ್ಲಕ್ಷ : ಇಷ್ಟೆಲ್ಲಾ ನಡೆಯುತ್ತಿರುವದನ್ನು ನೋಡಿಯೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಿವ್ಯ ನಿರ್ಲಕ್ಷ್ಯವನ್ನು ತಾಳಿದ್ದಾರೆ.
ಹಂಗಾಮು ಪ್ರಾರಂಭವಾಗುವದಕ್ಕೂ ಮುಂಚೆಯೇ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ದಾಲ್ಚಿನ್ನಿ ಮರಗಳು ಉಳಿದುಕೊಳ್ಳುತ್ತವೆ. ಅಲ್ಲದೆ ಇದೇ ರೀತಿ ಮಾನವನ ದುರಾಸೆಗೆ ಪ್ರಾಣತೆತ್ತು ನಿತ್ಯ ನಾಶ ಹೊಂದುತ್ತಿರುವ ದಾಲ್ಚಿನ್ನಿಯಂಥಹ ಇನ್ನೂ ಹಲವು ಸಸ್ಯ ಸಂಕುಲಗಳು ಬದುಕಿ ಬಾಳುತ್ತವೆ. ವಿದ್ಯುತ್ ಸ್ಥಾವರ, ಅಣುಸ್ಥಾವರ,ವಿದ್ಯತ್ ಸಾಗಾಣಿಕೆಯ ಬೃಹತ್ ತಂತಿಗಳನ್ನು ನಿಮರ್ಿಸುವ ಭರಾಟೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಹಚ್ಚಹಸಿರಿನ ಕಾಡಿನ ನಿರ್ಮಲ ಪರಿಸರದ ಹೆಚ್ಚಿನ ಭಾಗ ಅಳಿದುಹೋಗಿದೆ. ಹೀಗೆ ಉಳಿದುದರಲ್ಲಿ ಅಳಿಯಲಿರುವದೆಷ್ಟೋ.......!