ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳು.

















09-02-2014 ರ ವಿಜಯವಾಣಿಯ ವಿಜಯ ವಿಹಾರದಲ್ಲಿ ಪ್ರಕಟವಾದ ಕಥೆ.

ದಾಲ್ಚಿನ್ನಿ : ದರಮಾನವೇ ಶಾಪವಾಯ್ತು.


ಸಾಂಬಾರ ಪದಾರ್ಥಗಳ ಸಾಲಿನಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವ ದಾಲ್ಚಿನ್ನಿಗೇಕೆ ಇಂಥ ಶನಿದೆಸೆ ಪ್ರಾರಂಭವಾಗಿದೆಯೋ ಗೊತ್ತಿಲ್ಲ. ತಲೆತಲಾಂತರದಿಂದ ಔಷಧಿಗಾಗಿ, ಮಸಾಲೆ ಪದಾರ್ಥದ ರೂಪದಲ್ಲಿ ಮಾನವನ ನಿತ್ಯ ಬದುಕಿನಲ್ಲಿ ಬಳಕೆಯಾಗುವ ದಾಲ್ಚಿನ್ನಿ, ಪಶ್ಚಿಮ ಘಟ್ಟದ ಕಾಡುಗಳಲ್ಲಿ ಪೊದೆಯಂತೆ ಬೆಳೆಯುತ್ತಿದ್ದ ದಾಲ್ಚಿನ್ನಿ ಮತ್ತು ಇದರ ಇತರ ಪ್ರಬೇಧಗಳು ಹೇಳಹೆಸರಿಲ್ಲದಂತೆ ನಿನರ್ಾಮವಾಗುತ್ತಿದೆ. ಆರೈಕೆ ಬೇಡದ, ತನ್ನ ಪಾಡಿಗೆ ತಾನು ಮುಗಿಲೆತ್ತರ ಬೆಳೆದು ನಿಲ್ಲುವ ದಾಲ್ಚಿನ್ನಿಗೆ ಇತ್ತೀಚಿನ ದಿನಗಳಲ್ಲಿ ದರಮಾನವೇ ಶಾಪವಾಗಿ ಪರಿಣಮಿಸುತ್ತಿರುವದು ಕಹಿ ಸತ್ಯ. ಒಂದಲ್ಲ ಒಂದು ರೀತಿಯಲ್ಲಿ ಮಾನವನಿಗೆ
ಉಪಯುಕ್ತವಾಗಿರುವ ದಾಲ್ಚಿನ್ನಿ ಮರಗಳು ಇಂದು ಲಾಭ- ನಷ್ಟಗಳ ಲೆಕ್ಕಾಚಾರದ ನಡುವೆ ಸಿಲುಕಿ ಬದುಕು ಕಳೆದುಕೊಳ್ಳುತ್ತಿದೆ.
`ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ' ಎಂಬ ಮಾತೊಂದಿದೆ.ಅಂತೆಯೇ ದಾಲ್ಚಿನ್ನಿ ಮರಗಳು ಕೂಡ. ಈ ಮರದ ಪ್ರತಿಯೊಂದು ಭಾಗವೂ
ಉಪಯುಕ್ತವೇ. ಎಲೆಯಾಗಲೀ, ಮೊಗ್ಗಾಗಲೀ, ತೊಗಟೆಯಾಗಲೀ, ಯಾವುದೂ ಕೂಡ ನಿರುಪಯುಕ್ತವೆನ್ನುವಂತಿಲ್ಲ. ಮಾರುಕಟ್ಟೆಯಲ್ಲಿ ಈ ಮರದ ಯಾವುದೇ ಭಾಗವನ್ನು ಮಾರಿದರೂ ಉತ್ತಮವಾದ ದರವಿದೆ. ಒಣಗಿದ ತೊಗಟೆಗಂತೂ ಬಂಗಾರದ ಬೆಲೆ.
       ಸ್ಯಶಾಸ್ತ್ರೀಯವಾಗಿ ಹೇಳಬೇಕೆಂದರೆ ದಾಲ್ಚಿನ್ನಿ ಲ್ಯಾರೇಸಿಯ ಕುಟುಂಬಕ್ಕೆ ಸೇರಿದ ಹೂ ಬಿಡುವ ಸಸ್ಯ. ವಿಜ್ಞಾನಿಗಳು ಸಿನ್ನಮೋಮಂ ವೆರಮ್ ಎನ್ನುತ್ತಾರೆ. ಹಲವಾರು ಪ್ರಭೇದಗಳೂ ಗುರುತಿಸಲ್ಪಟ್ಟಿವೆ. ದಾಲ್ಚಿನ್ನಿಯ ಹೂವರಳಿ ಕಾಯಿಕಟ್ಟುವ ಹಂತದಲ್ಲಿ ಲವಂಗದಂತೆ ಗೋಚರಿಸುತ್ತದೆ. ಅಲ್ಲದೆ ಲವಂಗದಂತೆಯೇ ಪರಿಮಳವನ್ನೂ ಹೊಂದಿರುತ್ತದೆ. ಒಣಗಿದ ಎಲೆ ಹಾಗೂ ಒಣಗಿದ ತೊಗಟೆ ಮಸಾಲೆ ಪದಾರ್ಥದಂತೆ ಹೇರಳವಾಗಿ ಬಳಕೆಯಾಗುತ್ತದೆ. ಎಷ್ಟರ ಮಟ್ಟಿಗೆ ಎಂದರೆ, ಗರಂ ಮಸಾಲೆ, ಮಾಂಸಾಹಾರಿ ತಿನಿಸುಗಳು,  ಪಲಾವ್, ಚಿತ್ರಾನ್ನ ಮುಂತಾದವುಗಳಲ್ಲಿ ಈ ಎಲೆ ಇಲ್ಲವೆಂದರೆ ರುಚಿಯೇ ಇಲ್ಲ. ಹಾಗೂ ಇದರ ಎಲೆ,ತೊಗಟೆಗಳನ್ನು ಭಟ್ಟಿ ಇಳಿಸಿ ಎಣ್ಣೆಯನ್ನೂ ತಯಾರಿಸಲಾಗುತ್ತದೆ. ಈ ಎಲ್ಲಾ ಉತ್ಪನ್ನಗಳಿಗೂ ಮಾರುಕಟ್ಟೆಯಲ್ಲಿ ಯಾವುದೇ ಸಮಯದಲ್ಲೂ ಉತ್ತಮವಾದ ದರವಿರುತ್ತದೆ. ಪ್ರಸ್ತುತ ದರಮಾನವೇ ದಾಲ್ಚಿನ್ನಿ ಸಸ್ಯವರ್ಗಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಹೀಗಾಗಿ ಇಂಥ ದಾಲ್ಚಿನ್ನಿ ಹೇರಳವಾಗಿ ಬೆಳೆಯುತ್ತಿದ್ದ ಉತ್ತರ ಕನ್ನಡ, ಶಿವಮೊಗ್ಗ ಮುಂತಾದ ಪ್ರದೇಶಗಳ ಬುಡಕಟ್ಟು ಹಾಗೂ ಅರಣ್ಯ ಆಶ್ರಯಿತ ಜನಾಂಗಗಳ ಉತ್ತಮ ಆದಾಯದ ಮೂಲವೂ ಹೌದು. ದಾಲ್ಚಿನ್ನಿ ಮೊಗ್ಗಿಗೆ ಸರಾಸರಿ ದರಮಾನ ಪ್ರತೀ ಕೆ.ಜಿ.ಗೆ 500ರೂ ಇರುತ್ತದೆಯಾದ್ದರಿಂದ ಶತ್ರುಗಳ ಕಾಟ ವಿಪರೀತವಾಗಿದೆ.

ಅಸಮರ್ಪಕ ಸಂಗ್ರಹ ರೀತಿ : ದಾಲ್ಚಿನ್ನಿ ಮರದ ಯಾವುದೇ ಉತ್ಪನ್ನವನ್ನು ಸಂಗ್ರಹಿಸಿ ಮಾರಾಟ ಮಾಡಲು ಅರಣ್ಯ ಇಲಾಖೆಯಿಂದ ಅಧಿಕೃತ ಪರವಾನಿಗೆಯನ್ನು ಪಡೆದು ಅವರು ತಿಳಿಸಿದ ರೀತಿಯಲ್ಲೇ ಸಂಗ್ರಹಿಸಬೇಕಾಗುತ್ತದೆ. ಆದರೆ, ಹಲವರು ದುರಾಸೆಯಿಂದ ಮರದ ಬುಡಕ್ಕೇ ಕೊಡಲಿಪೆಟ್ಟು ಹಾಕುತ್ತಿದ್ದಾರೆ. ಸೂಕ್ಷ್ಮ ಮತ್ತು ಮೃದು ಜಾತಿಯ ಮರವಾದ ದಾಲ್ಚಿನ್ನಿ ಒಂದು ಕೊಂಬೆಯನ್ನು ಕಡಿದರೂ ಚೇತರಿಸಿಕೊಂಡು ಚಿಗುರಲು ಹಲವು ವರ್ಷಗಳೇ ಬೇಕು. ಹಾಗಿರುವಾಗ, ಮನಬಂದಂತೆ ಕಡಿದರೆ ಅದು ಎಂದಿಗೂ ಚೇತರಿಸಿಕೊಳ್ಳಲು ಸಾಧ್ಯವಿಲ್ಲ.
internet photo
ದಾಲ್ಚಿನ್ನಿ ಸಸ್ಯವರ್ಗದಲ್ಲಿ ಬೀಜೋತ್ಪತ್ತಿ ಇಲ್ಲವಾದ ಕಾರಣ ಗಿಡಗಳು ಹುಟ್ಟುವದೂ ವಿರಳವಾಗಿದೆ. ತೀರಾ ದೊಡ್ಡದಾಗಿರುವ, ಹತ್ತಲು ಅಸಾಧ್ಯವಾದ ಮರಗಳನ್ನು ಬುಡದಲ್ಲಿಯೇ ಕಡಿದು ಮೊಗ್ಗುಗಳನ್ನು ಸಂಗ್ರಹಿಸಿರುವದಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಲವು ಕಾನುಗಳಲ್ಲಿ ಸಾಕ್ಷಿ ದೊರೆಯುತ್ತದೆ. ಯಾರಿಗೂ ಮೊಗ್ಗನ್ನು ಕೀಳುವ ವ್ಯವಧಾನವಿಲ್ಲ. ನೇರವಾಗಿ ಟೊಂಗೆಗೇ ಕೊಡಲಿ ಪೆಟ್ಟು. ಒಂದು ಕೆ.ಜಿ.ಮೊಗ್ಗು ಸಂಗ್ರಹಿಸುವಲ್ಲಿ ಸುಮಾರು ಎರಡು ಚೀಲದಷ್ಟು ಸೊಪ್ಪು ಕಡಿಯಲ್ಪಡುತ್ತದೆ.ಆದರೆ, ಮರವನ್ನು ಬೋಳಿಸಿದವರು ಸೊಪ್ಪನ್ನು ಅಲ್ಲಲ್ಲಿಯೇ ಬಿಟ್ಟು ಹೋಗುತ್ತಾರೆ. ಹಾಗೇಕೆ?ಸೊಪ್ಪಿಗೂ ದರವಿದೆಯಲ್ಲ ಎಂದು ವಿಚಾರಿಸಿದರೆ, ಅಯ್ಯೋ ಅದನ್ಯಾರು ಪೇಟೆಯವರೆಗೂ ಹೊತ್ತೊಯ್ಯುತ್ತಾರೆ? ಅಲ್ಲದೆ ನೋಡಿದವರಿಗೂ ಅನುಮಾನ ಬಂದು ನಮಗೇ ಇಲ್ಲದ ರಗಳೆಯಾಗುತ್ತದೆ. ಆದ್ದರಿಂದ ಅಲ್ಲಿಯೇ ಬಿಡುತ್ತೇವೆ ಇಲ್ಲವಾದರೆ, ಮನೆಗೆ ತಂದು ತೋಟದಲ್ಲಿ ಹರಡುತ್ತೇವೆ. ಅಥವಾ ಗೊಬ್ಬರಗುಂಡಿಗೆ ಹರಡಿದರೆ ಗೊಬ್ಬರವಾಗುತ್ತದೆ. ಮೊಗ್ಗಾದರೆ ಹಾಗಲ್ಲ. ಕೈಚೀಲದಲ್ಲಿ ಹಾಕಿಕೊಂಡು ಹೋದರೂ ಸರಿ ಎನ್ನುತ್ತಾರೆ. ಇನ್ನೆಲ್ಲಿಯ ದುರಾಸೆ ಮಾನವನಿಗೆ? ಹೀಗೆ ಮಾನವನ ದುರಾಸೆಯ ಪ್ರತಿಫಲವಾಗಿ ತನ್ನ ಅವಯವಗಳನ್ನು ಕತ್ತರಿಸಿಕೊಂಡು ಕೇವಲ ಮುಂಡವೊಂದೇ ಮುಗಿಲಿನತ್ತ ನೋಡುತ್ತ ಕಣ್ಣೀರಿಡುತ್ತಿರುವ ದೃಶ್ಯ ಕರುಳು ಹಿಂಡುತ್ತದೆ. ಸತ್ತು, ಒಣಗಿ ನೆಲಕಚ್ಚಿದ ಮರಗಳನ್ನು ನೋಡಿದರೆ ಅಲ್ಲೆಲ್ಲೋ ಯುದ್ಧಭೂಮಿಯಲ್ಲಿ ಯುದ್ಧವೆಲ್ಲಾ ಮುಗಿದ ಬಳಿಕ ವಾರಸುದಾರರಿಲ್ಲದೆ ಅನಾಥವಾಗಿ ಬಿದ್ದುಕೊಂಡಿರುವ ಶವಗಳಂತೆ ಕಾಣಿಸುತ್ತವೆ. ಹೌದು. ಜೀವಚ್ಛವಗಳು.....!

ಅರಣ್ಯ ಇಲಾಖೆಯ ನಿರ್ಲಕ್ಷ : ಇಷ್ಟೆಲ್ಲಾ ನಡೆಯುತ್ತಿರುವದನ್ನು ನೋಡಿಯೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಿವ್ಯ ನಿರ್ಲಕ್ಷ್ಯವನ್ನು ತಾಳಿದ್ದಾರೆ.

ಹಂಗಾಮು ಪ್ರಾರಂಭವಾಗುವದಕ್ಕೂ ಮುಂಚೆಯೇ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ದಾಲ್ಚಿನ್ನಿ ಮರಗಳು ಉಳಿದುಕೊಳ್ಳುತ್ತವೆ. ಅಲ್ಲದೆ ಇದೇ ರೀತಿ ಮಾನವನ ದುರಾಸೆಗೆ ಪ್ರಾಣತೆತ್ತು ನಿತ್ಯ ನಾಶ ಹೊಂದುತ್ತಿರುವ ದಾಲ್ಚಿನ್ನಿಯಂಥಹ ಇನ್ನೂ ಹಲವು ಸಸ್ಯ ಸಂಕುಲಗಳು ಬದುಕಿ ಬಾಳುತ್ತವೆ. ವಿದ್ಯುತ್ ಸ್ಥಾವರ, ಅಣುಸ್ಥಾವರ,ವಿದ್ಯತ್ ಸಾಗಾಣಿಕೆಯ ಬೃಹತ್ ತಂತಿಗಳನ್ನು ನಿಮರ್ಿಸುವ ಭರಾಟೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಹಚ್ಚಹಸಿರಿನ ಕಾಡಿನ ನಿರ್ಮಲ ಪರಿಸರದ ಹೆಚ್ಚಿನ ಭಾಗ ಅಳಿದುಹೋಗಿದೆ. ಹೀಗೆ ಉಳಿದುದರಲ್ಲಿ ಅಳಿಯಲಿರುವದೆಷ್ಟೋ.......!

 ಸ್ವಾವಲಂಬೀ ರೈತರ ಭೂಮಿಯಲ್ಲಿ ಸಾತ್ವಿಕ ಹಸಿರು.....
     
ತೋಟದಲ್ಲೇ ಸಾವಯವ ಗೊಬ್ಬರ
    ಕೃಷಿಯನ್ನು ಪರಿಸರಕ್ಕೆ ಪೂರಕವಾಗಿ ಬೆಳೆಸುವ,ಆಹಾರವನ್ನು ವಿಷಮುಕ್ತವಾಗಿ ಬೆಳೆಯುವ,ಕೃಷಿಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಲಾಲಗುಳಿಯಲ್ಲಿ ರೂಪುಗೊಂಡ ಸಾವಯವ ಗ್ರಾಮ ಯೋಜನೆ ಇಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಗತವಾಗುತ್ತಿದೆ. ರಾಸಾಯನಿಕ ಕೃಷಿಯಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ ಎಂಬ ಅಂಶವನ್ನು ಹೆಚ್ಚಿನ ಕೃಷಿಕರು ಅರ್ಥಮಾಡಿಕೊಂಡ ಕಾರಣ ಸಾವಯವ ಕೃಷಿಗೆ ಲಾಲಗುಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
      ಇದೀಗ ಈ ಸಾವಯವ ಗ್ರಾಮದಲ್ಲಿ 300 ಎಕರೆಗೂ ಹೆಚ್ಚಿನ ಕೃಷಿ ಭೂಮಿಯಲ್ಲಿ ಒಟ್ಟೂ 102 ಕುಟುಂಬಗಳು ಸಾವಯವ ಕೃಷಿಯಲ್ಲಿ ತೊಡಗಿಕೊಂಡಿವೆ. ಭತ್ತ,ಬಾಳೆ,ಅಡಿಕೆ,ತೆಂಗು,ಕಾಳುಮೆಣಸು ಮುಂತಾದ ಬೆಳೆಗಳನ್ನು ಸಾವಯವ ಕೃಷಿಗೆಂದು ಆಯ್ಕೆಮಾಡಿಕೊಂಡಿದ್ದಾರೆ. ಇದೀಗ ಇಲ್ಲಿನ ತೋಟ ಗದ್ದೆಗಳಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ `ಸಾತ್ವಿಕ' ಹಸಿರು ಕಣ್ತುಂಬುತ್ತದೆ.
        ಈ ಗ್ರಾಮಗಳ ರೈತರು ಕಳೆದ ವರ್ಷ 500 ಟನ್ ಗೂ ಹೆಚ್ಚು ಕಾಂಪೋಸ್ಟ್ ಗೊಬ್ಬರವನ್ನು ತಾವೇ ಉತ್ಪಾದಿಸಿ ತಮ್ಮದೇ ತೋಟಗದ್ದೆಗಳಿಗೆ ಬಳಸಿಕೊಂಡಿದ್ದಾರೆ. ಇಲ್ಲವಾದಲ್ಲಿ
ಸಾವಯವ ಹಸಿರು
ಪ್ರತಿ ವರ್ಷ 1 ಲಾರಿ ಗೊಬ್ಬರಕ್ಕೆ 5 ಸಾವಿರದಷ್ಟು ಹಣ ನೀಡಿ 50-60ಲಾರಿಗಳಷ್ಟು ಗೊಬ್ಬರವನ್ನು ಹೊರಗಿನಿಂದ ತರಿಸಲಾಗುತ್ತಿತ್ತು. ಈಗ ಆ ತಾಪತ್ರಯವಿಲ್ಲ.ಪ್ರತಿಯೊಬ್ಬ ಕೃಷಿಕನ ತೋಟದಲ್ಲಿಯೂ ನಾಲ್ಕೈದು ಇಂಥಹ ಕಾಂಪೋಸ್ಟ್ ತಯಾರಿಸುವ ತೊಟ್ಟಿಗಳು ಕಾಣಸಿಗುತ್ತವೆ.ಕಚ್ಚಾ ವಸ್ತುಗಳಾಗಿ ತೋಟದಲ್ಲಿಯೇ ಸಿಗುವ ಅಡಿಕೆ ಸೋಗೆಗಳು,ತೆಂಗಿನ ಗರಿಗಳು,ಹಸಿರು ಸೊಪ್ಪು,ಕಳೆ ಗಿಡಗಳು,ಬಾಳೆ ಗಿಡದ ತ್ಯಾಜ್ಯಗಳೆಲ್ಲವೂ ಇಲ್ಲಿ ತೊಟ್ಟಿಗಳನ್ನು ಸೇರಿ ಕಾಂಪೋಸ್ಟ್ ಗೊಬ್ಬರವಾಗಿ ಮತ್ತೆ ಅದೇ ಗಿಡಗಳಿಗೆ ಗೊಬ್ಬರವಾಗಿ ಬಳಕೆಯಾಗುತ್ತವೆ! ಸ್ಥಳೀಯವಾಗಿಯೇ ತಯಾರಿಸಿದ ಹಸಿರೆಲೆ ಗೊಬ್ಬರ ಬಳಸಿದ್ದರಿಂದ ಈ ರೈತರು ಸಂಪೂರ್ಣ ಸ್ವಾವಲಂಬಿಗಳಾಗಿದ್ದಾರೆ. ಬೆಳೆಯ ಇಳುವರಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂಬುದು ರೈತರ ಅಭಿಪ್ರಾಯ.
      ಸಾವಯವ ಕೃಷಿಯ ಉತ್ತಮ ನಿರ್ವಹಣೆಗಾಗಿ 7 ಸಾವಯವ ಕೃಷಿಕರ ಗುಂಪನ್ನು ರಚಿಸಿಕೊಳ್ಳಲಾಗಿದೆ. ಈ ಗುಂಪಿನ ಸದಸ್ಯರು ಪ್ರತಿ 15
ದಿನಗಳಿಗೊಮ್ಮೆ  ಸಭೆಸೇರಿ ಪರಸ್ಪರ ವಿಚಾರ ವಿನಿಮಯ ಮಾಡುತ್ತಾರೆ. ಪ್ರತಿ ಗುಂಪಿನಿಂದ ಇಬ್ಬರು ಪ್ರತಿನಿಧಿಗಳು ಸಂಘದ ನಿದರ್ೇಶಕ ಮಂಡಳಿಯಲ್ಲಿದ್ದು ಸಾವಯವ ಕೃಷಿ ಅಭಿವೃದ್ಧಿಯ ಬಗ್ಗೆ ಗಮನಿಸುತ್ತಾರೆ. ಕ್ಷೇತ್ರ ಸಹಾಯಕರ ಹಾಗೂ ಯೋಜನೆಯ ಕ್ಷೇತ್ರಾಧಿಕಾರಿಗಳ ನಿರಂತರ ನೆರವು ಇದ್ದೇ ಇದೆ . ಈ ವರ್ಷದಿಂದ ಸಾವಯವ ರೈತರ
ಜಮೀನುಗಳು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ದೃಢೀಕರಣ ಗೊಳ್ಳುತ್ತಿವೆ.
ರೈತ ಗುಂಪಿನ ಸದಸ್ಯರು ಸಂರಕ್ಷಿತ ಅರಣ್ಯವನ್ನು ನಿಮರ್ಿಸುವ ಬಗ್ಗೆಯೂ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತರಾಗುವ ಮೂಲಕ ಅರಣ್ಯಗಳ
ಸಂರಕ್ಷಣೆಯಲ್ಲಿಯೂ ತೊಡಗಿಕೊಂಡಿದ್ದಾರೆ.ಇದಕ್ಕೆ ಪೂರಕವಾಗಿ ಕಳೆದ ವರ್ಷ ಅರಣ್ಯ ಪ್ರದೇಶದಲ್ಲಿಯೇ ನರ್ಸರಿಯನ್ನು ನಿಮರ್ಿಸಿ 5 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ.
        ಸಾವಯವ ಕೃಷಿಯಿಂದಾಗಿ ಈ ಊರಿನ ರೈತರು 20 ಕ್ಕೂ ಹೆಚ್ಚು ವಿನಾಶದ ಅಂಚಿನಲ್ಲಿರುವ ಸಾಂಪ್ರದಾಯಿಕ ಭತ್ತದ ಬೀಜಗಳನ್ನು , ಸ್ಥಳಿಯ ತರಕಾರಿ ಬೀಜಗಳನ್ನು ರಕ್ಷಿಸಿದ್ದಾರೆ.
ಸಾವಯವ ಕೃಷಿಯಿಂದ ಬಹಳ ಪ್ರಯೋಜವಾಗಿದೆ. ರಾಸಾಯನಿಕ ಕೃಷಿಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಪ್ರತಿನಿತ್ಯ ದೂರದ ಪಟ್ಟಣದ ಆಸ್ಪತ್ರೆಗೆ ಓಡಾಡುವ
ತಾಪತ್ರಯ ತಪ್ಪಿದೆ. ಉದ್ಯೋಗಕ್ಕೆಂದು ಪಟ್ಟಣಗಳೆಡೆಗೆ ಮುಖಮಾಡಿ ಹೋಗಿರುವ ಅನೇಕ ಯುವಕರು ಸಾವಯವ ಗ್ರಾಮ ಯೋಜನೆ ಪ್ರಾರಂಭವಾದ ನಂತರ ಮತ್ತೆ ಹಳ್ಳಿಗಳೆಡೆಗೆ ಮರಳಿ,ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಇಲ್ಲಿನ ಸಾವಯವ ಕೃಷಿಕರಾದ ವೆಂಕಟ್ರಮಣ ಭಟ್ ಗೋಟಗುಳಿ,
ಗೋವಿಂದ ಗೌಳಿ, ಶ್ರೀಕಾಂತ ಮರಾಠಿ ರೈತ ಪ್ರತಿನಿಧಿಗಳಾದ ಮಹಾದೇವ ದೇಸಾಯಿ ಮುಂತಾದವರು.
`ಕೃಷಿ ತೋ ನಾಸ್ತಿ ದುಭರ್ಿಕ್ಷಂ'ಎಂಬ ಧ್ಯೇಯ ವಾಕ್ಯದಡಿ ಕಾರ್ಯನಿರ್ವಹಿಸುತ್ತಿರುವ ಲಾಲಗುಳಿಯ ಅಕ್ಷಯ ಜೀವನ ಆಗರ್ಾನಿಕ್(ರಿ)ಎಂಬ ಹೆಸರಿನಲ್ಲಿ ನೋಂದಾವಣಿಗೊಂಡಿರುವ ಸಾವಯವ ಗ್ರಾಮ ತಾಲೂಕಿನ ಇತರ ಗ್ರಾಮಗಳಲ್ಲೂ ಸಾವಯವ ಕೃಷಿಯ ಕಲ್ಪನೆ,ಕನಸು ಮೂಡಿಸುತ್ತಿದೆ




              ಇದು ಕಥೆಯಲ್ಲ! ಜವರಾಯನ ಅಟ್ಟಹಾಸ ! ಅರಬೈಲ್ ಘಾಟ್ ಕರಾಳ ಮುಖ....

                     
           6 ಮೈಲು ಉದ್ದದ ಈ ರಸ್ತೆಯ ಗುಂಟ ಸಂಭವಿಸಿದ ಅಪಘಾತ, ಸಾವು ನೋವುಗಳನ್ನು
ಲೆಕ್ಕವಿಟ್ಟವರಾರು ? ತಮ್ಮ ಆಪ್ತರನ್ನು ; ಬಂಧುಗಳನ್ನು ಕಳೆದುಕೊಂಡವರ ಕಣ್ಣೀರನ್ನು ಈ ಅರಬೈಲ್ ಘಾಟ್ ಎಂಬ ಸ್ಮಶಾನಸದೃಶ ರಸ್ತೆ ಅದೆಷ್ಟು ತಣ್ಣಗೆ ಇಂಗಿಸಿಕೊಳ್ಳುತ್ತಿದೆ! ಹಾಗಿದ್ದರೆ,ದಟ್ಟ ಹಸಿರು,  ಬೆಟ್ಟ-ಗುಡ್ಡಗಳ ನಡುವೆ ಹಾವಿನಂತೆ ಹರಿದಿರುವ ರಾಷ್ಟ್ರೀಯ ಹೆದ್ದಾರಿ 63 ರ ಮೇಲಿರುವ ಈ ಅರಬೈಲ್ ಘಾಟ್ ಅಷ್ಟೊಂದು ಕ್ರೂರಿಯಾ? ಪ್ರಕೃತಿ ಬೆಡಗಿನ ಜೊತೆಯಲ್ಲೇ ಅಂಥಹುದೊಂದು ಕರಾಳ ಮುಖವನ್ನೂ ಈ ಘಾಟ್ ಹೊಂದಿದೆಯಾ? ಇತ್ತೀಚಿನ
ದಿನಗಳಲ್ಲಿ ಪ್ರತಿನಿತ್ಯವೂ ಅಪಘಾತಗಳು ಸಂಭವಿಸುತ್ತಿರುವದನ್ನು ಗಮನಿಸಿದರೆ, ಇದು ಅರಬೈಲ್ ಘಾಟೋ ಅಥವಾ ಸ್ಮಶಾನ ಘಟ್ಟವೊ ಅನಿಸುತ್ತದೆ.
       ರಾ.ಹೆ 63 ರಲ್ಲಿ ಯಲ್ಲಾಪುರ ಮತ್ತು ಅಂಕೋಲಾ ತಾಲೂಕುಗಳ ನಡುವೆ ಚಿನ್ನಾಪುರ-ಅರಬೈಲ್ಗಳ ಮಧ್ಯೆ ಇರುವ 6 ಮೈಲಿ ಉದ್ದದ ಅಂಕುಡೊಂಕಾಗಿ ಘಟ್ಟ-ಇಳಿಜಾರುಗಳಿಂದ ಕೂಡಿದ ರಸ್ತೆಯೇ ಅರಬೈಲ್ ಘಾಟ್. ಒಂದೆಡೆ ತಲೆಸುತ್ತುಬರಿಸುವ ಕಣಿವೆಗಳು, ಇನ್ನೊಂದೆಡೆ ಮುಗಿಲುಮುಟ್ಟುವ ಮರಗಳನ್ನೊಳಗೊಂಡ ಗುಡ್ಡಗಳ ನಡುವೆಯಿದೆ ಈ ಘಾಟ್. ಹಾಗೆ ನೋಡಿದರೆ,ಈ ಘಾಟ್ ಜಿಲ್ಲೆಯ ಉಳಿದೆಲ್ಲ ಘಾಟ್ಗಳಿಗಿಂತಲೂ ಅಪಾಯಕಾರಿಯೆಂದೇ ಗುರುತಿಸಲ್ಪಟ್ಟಿದೆ.ಕಾರಣ,ಇಲ್ಲಿರುವ ಅತ್ಯಂತ ಅಪಾಯಕಾರಿ ತಿರುವುಗಳು. ಈ 6 ಮೈಲು ದೂರದಲ್ಲಿ `ಯು' ಆಕಾರದ ತಿರುವುಗಳು ಎಣಿಸಲಸಾಧ್ಯವಾದಷ್ಟಿವೆ.
     ಳೆದ 6 ವರ್ಷಗಳ ಹಿಂದೆ ಮ್ಯಾಂಗನೀಸ್ ಅದಿರು ಉದ್ಯಮ ಪ್ರಾರಂಭವಾಗುವವರೆಗೂ ಶಾಂತವಾಗಿಯೇ ಇತ್ತು ಈ ಘಾಟ್.ಆದರೆ,ಎಂದು ಅದಿರು ಉದ್ಯಮ ಪ್ರಾರಂಭಗೊಂಡು ಬಳ್ಳಾರಿ-ಬೆಲೆಕೇರಿಗಳ ನಡುವೆ ಮ್ಯಾಂಗನೀಸ್ ಅದಿರನ್ನು ತುಂಬಿಕೊಂಡ ಲಾರಿಗಳು ಇರುವೆಗಳ ಸಾಲಿನಂತೆ ಹರಿದುಬರತೊಡಗಿದವೋ ಅಂದಿನಿಂದಲೇ ಪ್ರಾರಂಭಗೊಂಡಿತು ಹೆದ್ದಾರಿಯಲ್ಲಿ ಸಾವಿನ ಸರಮಾಲೆ.
     ದೀಗ ರಾ.ಹೆ.63ರಲ್ಲಿ ಪ್ರತಿನಿತ್ಯ ಇತರೇ ವಾಹನಗಳನ್ನು ಹೊರತುಪಡಿಸಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅದಿರು ವಾಹನಗಳು ಸಂಚರಿಸುತ್ತಿವೆ. ಅಂತೆಯೇ ಸಾವು ನೋವುಗಳ ಸಂಖ್ಯೆಯೂ ವಿಪರೀತವಾಗಿ ಹೆಚ್ಚಿದೆ.ಕಡಿಮೆಯೆಂದರೂ ಪ್ರತಿದಿನ ಎರಡು ಅಪಘಾತಗಳು,ಎರಡಾದರೂ ಗಂಭೀರ ಗಾಯದ ಪ್ರಕರಣಗಳಷ್ಟೇ ಅಲ್ಲದೆ,ತಿಂಗಳಿಗೊಂದಾದರೂ ಜೀವಬಲಿ ನಡೆಯುತ್ತದೆ.ದಾಖಲೆಗಳ ಪ್ರಕಾರ ಕಳೆದ ವರ್ಷ ಸಂಭವಿಸಿದ ಅಪಘಾತಗಳಲ್ಲಿ ಮಡಿದವರ ಸಂಖ್ಯೆ 20 ಕ್ಕೂ ಹೆಚ್ಚು .ಗಂಭೀರವಾಗಿ ಗಾಯಗೊಂಡವರ ಸಂಖ್ಯೆ ಇದರ ನಾಲ್ಕು ಪಟ್ಟು ಹೆಚ್ಚು.ಇವುಗಳಲ್ಲಿ ಹೆಚ್ಚಿನ ಅಪಘಾತಗಳಿಗೆ ಮ್ಯಾಂಗನೀಸ್ ಅದಿರು ಲಾರಿ ಚಾಲಕರೇ ಕಾರಣವಾಗುತ್ತಾರೆ.ಇಕ್ಕಟ್ಟಿನ ತಿರುವುಗಳು,ಅಲ್ಲಲ್ಲಿ ಕೆಟ್ಟು ರಸ್ತೆಯ ಮಧ್ಯದಲ್ಲಿಯೇ ನಿಲ್ಲುವ ವಾಹನಗಳು,ವಾಹನಗಳ ನಡುವಿನ ವೇಗದ ಪೈಪೋಟಿಗಳೂ ಅಪಘಾತಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ.
       ಹೆದ್ದಾರಿಯ ನಿಮರ್ಾಣವೂ ಸ್ವಲ್ಪ ಮಟ್ಟಿಗೆ ಅಪಘಾತಗಳಿಗೆ ಹಾಗೂ ಸಂಚಾರ ವ್ಯತ್ಯಯಕ್ಕೆ ಕಾರಣವಾಗುತ್ತದೆ.ಮಳೆಗಾಲದಲ್ಲಿ ಗುಡ್ಡಗಳು ಹಾಗೂ ಗುಡ್ಡದ ಮೇಲಿರುವ ಮರಗಿಡಗಳು ಕುಸಿದು ರಸ್ತೆಯ ಮೇಲೆ ಬೀಳುತ್ತವೆ.ಇದರಿಂದ ಸಂಚಾರ ವ್ಯತ್ಯಯವಾಗಿ ಅಪಘಾತಗಳು ಸಂಭವಿಸುತ್ತವೆ.
       ದಿರು ಲಾರಿ ಚಾಲಕರು ನಿರಂತರವಾಗಿ ನಿದ್ರೆಯನ್ನೂ ಬಿಟ್ಟು ತಿರುವುಗಳನ್ನೂ ಲೆಕ್ಕಿಸದೆ ವೇಗವಾಗಿ ವಾಹನಗಳನ್ನು ಚಾಲಿಸುವದರಿಂದ ಅಪಘಾತಗಳು ಸಂಭವಿಸುವದು ಹೆಚ್ಚಾಗಿದೆ.ಇದರ ಜೊತೆಗೆ ಪೈಪೋಟಿಯ ಚಾಲನೆ,ವಾಹನಗಳಲ್ಲಿರುವ ಯಾಂತ್ರಿಕ ದೋಷ,ಅನನುಭವಿ ಚಾಲಕರು,ವಾಹನ ಚಾಲನೆ ಮಾಡುವಾಗಲೂ ಮದ್ಯಪಾನ ಮಾಡಿರುವದು ಇವೇ ಮುಂತಾದ ಅಂಶಗಳೂ ಈ ಘಾಟ್ನಲ್ಲಿ ಸಾವುನೋವುಗಳಿಗೆ ಕಾರಣವಾಗಿದೆ.ಅಪಘಾತ ಸಂಭವಿಸಿದ ನಂತರ ಅಗತ್ಯವಾದ ಪ್ರಾಥಮಿಕ ಚಿಕಿತ್ಸೆ ಲಭ್ಯವಾಗದೇ ಹಲವರು ಸಾವನ್ನಪ್ಪಿದ್ದಾರೆ.ಯಲ್ಲಾಪುರ ಆರಕ್ಷಕ ಠಾಣೆಯಿಂದ ಅಧಿಕಾರಿಗಳು 22 ಕಿ.ಮೀ ದೂರವಿರುವ ಅರಬೈಲ್ ಘಾಟ್ಗೆ ತಲುಪಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಸಾಗಿಸುವವರೆಗೆ ಪರಿಸ್ಥಿತ ಕೈಮೀರಿ ಗಾಯಾಳುಗಳು ಮಾರ್ಗದ ಮಧ್ಯದಲ್ಲಿಯೇ ಮೃತಪಟ್ಟಿರುವ ಉದಾಹರಣೆಗಳೂ ಇವೆ.
         ಇದೀಗ ಚತುಷ್ಪಥ ಹೆದ್ದಾರಿಯ ಕನಸಿನ ನೀಜ ಬಿತ್ತಿದೆ ಸಕರ್ಾರ!ಆ ಕನಸು ನನಸಾಗುವವರೆಗೂ ಜವರಾಯನ ಅಟ್ಟಹಾಸ ಹೀಗೆಯೇ ಮುಂದುವರಿಯುತ್ತದೆ. ಅರಬೈಲ್ ಘಾಟ್ನ ನೆಲ ರಕ್ತದೋಕುಳಿಗಾಗಿ ಎದುರು ನೋಡುತ್ತಲೇ ಇರುತ್ತದೆ!
---ಸತೀಶ್ ಮಾಗೋಡ್


ಈ ಕಾರ್ ಓಡೋಕೆ ಗಾಳಿನೇ ಸಾಕು!

ಲಕಲಕಲಕಾ....ಈ ಕಾರು ಓಡೋದಿಕ್ಕೆ ಪೆಟ್ರೊಲ್ ಬೇಡ, ಡೀಸಲ್ಲೂ ಬೇಡ. ಒಟ್ಟಾರೆಯಾಗಿ ಇಂಧನವೇ ಬೇಡ! ಇದೇನಿದು ಕಾಮಿಡಿ? ಇದೇನು ರಜನೀಕಾಂತ್ ಮಾತ್ರ ಓಡಿಸುವಂಥಾ ಕಾರು ಅಂದ್ಕೊಂಡ್ರಾ?! ಛೇ..ಛೇ... ಹಾಗೇನೂ ಇಲ್ಲ. ಈ ಸಂಶೋಧನೆಯೇನಾದ್ರೂ ಸಕ್ಸೆಸ್ ಆಗಿಯೇ ಬಿಡ್ತು ಅಂದ್ರೆ ರಜನೀಕಾಂತ್ ಯಾಕೆ, ನೀವೂ ಓಡಿಸಬಹುದು ಗಾಳಿ ಕಾರನ್ನ. ಇಲ್ಲೀವರೆಗೂ ಕಾರು ಗಾಳಿಯಲ್ಲೇ ಓಡಿತಂತೆ, ಗಾಳಿಯಂತೆ ನುಗ್ಗಿತಂತೆ ಎಂಬೆಲ್ಲ ಸುದ್ದಿಗಳನ್ನು ಕೇಳುತ್ತಿದ್ದೆವಲ್ಲ, ಆದರಿದು ಸಂಪೂರ್ಣ ಭಿನ್ನ! ಇದು ಗಾಳಿಯಿಂದಲೇ ಓಡೋ ಕಾರು! ನಂಬಿ ಸ್ವಾಮಿ, ಈ ಕಾನ್ಸೆಪ್ಟ್ ಇರೋದೇ ಹೀಗೆ! 

ಹೌದು. ಚೀನಾದ ಬೀಜಿಂಗ್ನ ಹಳ್ಳಿಯ ವ್ಯಕ್ತಿಯೊಬ್ಬ ಇಂಥದ್ದೊಂದು ಫಾಮ್ಯರ್ುಲಾ ಕಂಡುಹಿಡಿದಿದ್ದಾನೆ. ಹಳ್ಳಿಯೆಂದರೆ, ಅತೀ ಹಿಂದುಳಿದ ಹಳ್ಳಿಯದು. ಆದರೆ, ಅಲ್ಲಿಯ ಟ್ಯಾಂಗ್ ಝೆನ್ಪಿಂಗ್ ಎಂಬ 55 ವರ್ಷ ವಯಸ್ಸಿನ ಈ ವ್ಯಕ್ತಿಯ ಸಂಶೋಧನೆ ಜಗತ್ತನ್ನೇ ಬೆರಗಾಗಿಸಿದೆ. ಪ್ರಾಥಮಿಕ ಹಂತದಲ್ಲಿ ಈತ ಸಿದ್ಧಪಡಿಸಿರುವ ಕಾರಿನ ಮಾದರಿ ಇಡೀ ಚೀನಾದ ವಾಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸದೊಂದು ಕ್ರಾಂತಿಯ ಅಲೆಯನ್ನೇ ಮೂಡಿಸಿದೆ. 
ಈ ಕಾರಿನ ಮಾದರಿ ಸಿದ್ಧವಾದದ್ದು ಒಂದು ಟ್ರ್ಯಾಕ್ಟರ್ ಗ್ಯಾರೇಜಿನಲ್ಲಿ. ಅದೂ ಕೆಲಸಕ್ಕೇ ಬಾರದೆಂದು ಎಸೆದ ಸ್ಕ್ರ್ಯಾಪ್ ಸ್ಕೂಟರ್ ಇಂಜಿನ್ ಮತ್ತು ಎಲೆಕ್ಟ್ರಿಕ್ ಸ್ಕೂಟರ್ನ ಬಿಡಿಭಾಗಗಳಿಂದ. ಕಾನ್ಸೆಪ್ಟ್ ಏನೋ ಹಳೆಯದೇ. ಚಿಕ್ಕದೊಂದು ಫ್ಲ್ಯಾಷ್ಬ್ಯಾಕ್ ನೆನಪಿಸಿಕೊಳ್ಳಿ. ಕೆಲ ವರ್ಷಗಳ ಹಿಂದೆ ನಮ್ಮ ನಗರದ ಅಡ್ಡಾದಿಡ್ಡಿ ರಸ್ತೆಗಳಲ್ಲಿ ಇಬ್ಬರು ಕುಳಿತುಕೊಳ್ಳಬಹುದಾದ ಬ್ಯಾಟರಿ ಚಾಲಿತ `ರೇವಾ' ಕಾರು ಓಡಾಡುತ್ತಿದ್ದುದು ಗೊತ್ತಲ್ಲ? ಅದರ ಮುಂದುವರಿದ ಭಾಗವೆನ್ನಬಹುದು. ರೇವಾ ಕಾರು ರಾ...ರಾ...ಎಂದು ಕರೆಯಲಿಲ್ಲ. ಕಾರಣ, ನಗರದ ಚಿಕ್ಕದಾದ ಓಡಾಟಕ್ಕೆ ಮಾತ್ರ ಸೂಕ್ತವೆನಿಸಿತ್ತು. ಒಮ್ಮೆ ಬ್ಯಾಟರಿಯನ್ನು ಚಾಜರ್್ ಮಾಡಿದರೆ 30ಕಿ.ಮೀ ಮಾತ್ರ ಸಂಚರಿಸಬಹುದಿತ್ತು. ರಸ್ತೆ ಮಧ್ಯೆ ಬ್ಯಾಟರಿ ಮುಗಿದು ನಿಂತುಬಿಟ್ಟರೆ ಮತ್ತೆ ಚಾಜರ್್ ಮಾಡುವುದೆಲ್ಲಿ? ಅದಲ್ಲದೆ, ಸಮತಟ್ಟಾದ ರಸ್ತೆಗಳಿಗೆ ಮಾತ್ರವೇ ಸೂಕ್ತವಾಗಿತ್ತು. 
ಈ ಕಾರು ಕೂಡ ಇದೇ ಮಾದರಿಯದ್ದಾಗಿದ್ದರೂ ಹೊಸತನವಿದೆ ನೋಡಿ. ಸದ್ಯಕ್ಕೆ ಈ ಕಾರನ್ನು ಒಬ್ಬರು ಮಾತ್ರ ಕುಳಿತುಕೊಳ್ಳುವಂತೆ ಸಿದ್ಧಪಡಿಸಿದ್ದು, ಕಾರಿನ ಮುಂಭಾಗದ ಮೂತಿಯಲ್ಲಿ ವಿದ್ಯುತ್ ಉತ್ಪಾದಿಸಲು ಬಳಸುವ ಟಬರ್ೈನ್ ಅಳವಡಿಸಲಾಗಿದೆ. ಪ್ರಾರಂಭದಲ್ಲಿ ಬ್ಯಾಟರಿ ಶಕ್ತಿಯಿಂದಲೇ ಓಡಲಾರಂಭಿಸುವ ಕಾರಿನ ವೇಗ 60 ಕಿ.ಮೀ ತಲುಪುತ್ತಿದ್ದಂತೆಯೇ ಮೂತಿಯಲ್ಲಿರುವ ಟಬರ್ೈನ್ ಕೆಲಸ ಪ್ರಾರಂಭಿಸುತ್ತದೆ. ಅಲ್ಲದೆ, ಮಾಲಿನ್ಯ ರಹಿತವಾಗಿ, ಸಹಜ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಅಲ್ಲಿಗೆ, ನೀವು ನಯಾ ಪೈಸೆ ಇಂಧನದ ಖಚರ್ಿಲ್ಲದೆ, ಎಷ್ಟು ದೂರ ಬೇಕಾದರೂ ಪ್ರಯಾಣಿಸಬಹುದು! ಪರೀಕ್ಷಾ ಹಂತದಲ್ಲಿ ಈ ಕಾರಿನ ವೇಗ ಪ್ರತಿ ಘಂಟೆಗೆ 110 ಕಿ.ಮೀ. 
`ನಾನು ಯಾವುದೇ ಲಾಭದ ಉದ್ದೇಶದಿಂದ ಈ ಪ್ರಯೋಗ ಮಾಡಿಲ್ಲ. ನನ್ನ ಈ ಪ್ರಯತ್ನ ಸಫಲವಾಗಿ ಹೆದ್ದಾರಿಗಳಲ್ಲಿ ಈ ಕಾರು ಸಂಚರಿಸುವದನ್ನು ನೋಡಬೇಕೆಂಬುದೇ ನನ್ನಾಸೆ. ನಾನು ಜನರ ಸೇವೆ ಮಾಡಲು ಬಯಸುತ್ತೇನೆ' ಎನ್ನುತ್ತಾನೆ ಟ್ಯಾಂಗ್ ಝೆನ್ಪಿಂಗ್. ಈಗಾಗಲೇ ಚೀನಾದ ಹಲವು ಕಾರು ಉತ್ಪಾದಕ ಸಂಸ್ಥೆಗಳು ಟ್ಯಾಂಗ್ನ ಈ ಸಂಶೋಧನೆಯನ್ನು ಗಮನಿಸಿದ್ದು, ಅಭಿವೃದ್ಧಿಪಡಿಸಲು ಆಸಕ್ತಿ ತೋರಿವೆ. ಆಮ್ಲ ಮಳೆಯಿಂದ ತತ್ತರಿಸಿರುವ ಚೀನಾದಂತಹ ಅಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರಕ್ಕೆ ಇಂತಹುದೊಂದು ಪರಿಸರ ಸ್ನೇಹಿ ಕಾರಿನ ಅಗತ್ಯವಿದ್ದೇ ಇದೆ. ಒಂದು ಅಂದಾಜಿನಂತೆ ಚೀನಾದಲ್ಲಿ ಪ್ರತಿನಿತ್ಯ 40 ಸಾವಿರಕ್ಕೂ ಹೆಚ್ಚು ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಅಲ್ಲದೆ ದಿನೇ ದಿನೇ ಹೆಚ್ಚುತ್ತಿರುವ ಇಂಧನದ ಕೊರತೆ, ಬೆಲೆಯೇರಿಕೆಯ ಜೊತೆಗೆ ವಾಯುಮಾಲಿನ್ಯವನ್ನು ತಡೆಗಟ್ಟುವಲ್ಲಿ ಈ ಸಂಶೋಧನೆ ಪರಿಣಾಮ ಬೀರಲಿದೆಯೇ...ಕಾದು ನೊಡಬೇಕಷ್ಟೇ 

                      ಈ ಮರಕ್ಕೆ ಕವಲಿಗೊಂದರಂತೆ ಜೇನು!

                ಮರವೊಂದಕ್ಕೆ ಅಬ್ಬಬ್ಬಾ ಎಂದರೆ ಎಷ್ಟು ಜೇನುಗೂಡುಗಳು ಕಟ್ಟಿಯಾವು?ಎರಡು?ಐದು?ಹೆಚ್ಚೆಂದರೆ ಹತ್ತರವರೆಗೂ ಕಟ್ಟಬಹುದೇನೋ.ಆದರೆ,ಈ ಮರಕ್ಕೆ ಕಟ್ಟಿರುವ ಜೇನುಗೂಡುಗಳನ್ನು ಎಣಿಸಿ ಎಣಿಸಿಯೇ ಸುಸ್ತಾಗಬೇಕು!ಒಂದರಿಂದ ಪ್ರಾರಂಭವಾಗುವ ನಿಮ್ಮ ಲೆಕ್ಖ ಐವತ್ತು ದಾಟಿ ನೂರರ ಸಮೀಪ ತಲುಪಿದರೂ ಅಚ್ಚರಿಯಿಲ್ಲ.ಹಾಗೆ ನೀವು ಎಣಿಸುತ್ತಿರುವಂತೆಯೇ ಕನಿಷ್ಠವೆಂದರೂ ಎರಡು ಹೊಸ ಜೇನು ಸಂಸಾರಗಳು ಅದೇ ಮರದ ಯಾವುದೋ ಟೊಂಗೆಯಲ್ಲಿ ಗೂಡು ಹೆಣೆಯಲು ಜಾಗವರಸುತ್ತಿರುತ್ತವೆ.ನಂಬಿ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಶತಶತಮಾನಗಳಿಂದ ಬೇಡ್ತಿ ಸೇತುವೆಯ ಸಮೀಪದ ಈ ಮರಕ್ಕೆ ಅಸಂಖ್ಯಾತ ಜೇನು ಗೂಡುಗಳು ಕಟ್ಟುತ್ತವೆ.ಸೋಜಿಗವೆಂದರೆ,ಬಿಡುವೇ ಇಲ್ಲದಂತೆ ವರ್ಷಪೂತರ್ಿ ಗೂಡು ಹೆಣೆಯುತ್ತಲೇ ಇರುತ್ತವೆ!

ಪ್ರಕೃತಿ ವೈಚಿತ್ರ್ಯ ;- ಬೇಡ್ತಿ ಸೇತುವೆಯನ್ನು ದಾಟಿ ಶಿರಸಿಯೆಡೆಗೆ ಸಾಗುವಲ್ಲಿ ಸೇತುವೆಯಿಂದ ಸ್ವಲ್ಪೇ ದೂರದಲ್ಲಿ ರಸ್ತೆಯ ಎಡ ಭಾಗದಲ್ಲಿಯೇ ಗೋಚರಿಸುತ್ತದೆ ಈ 'ಜೇನ್ಮರ'ಅಲ್ಲಿ ಸಂಸಾರ ಹೂಡಿರುವ ನೂರಕ್ಕೂ ಅಧಿಕ ಜೇನುಗೂಡುಗಳನ್ನು ನೋಡಿ ಕಣ್ತುಂಬಿಕೊಳ್ಳುವದೇ ಮುದ.ಸುತ್ತಲಿನ 2-3 ಕಿ.ಮೀ ವ್ಯಾಪ್ತಿಯಲ್ಲಿಯೂ ಜೇನಿನ ಮಧುರ ಘಮ.ಇದರೊಟ್ಟಿಗೆ ಪಕ್ಕದಲ್ಲಿಯೇ ಇರುವ ಇನ್ನೊಂದು ಮರವನ್ನು ಕೂಡ ಜೇನುಗಳು ಆಶ್ರಯಿಸಿ ಗೂಡು ಕಟ್ಟುತ್ತವೆ.ಅಂತೆಯೇ ತಾಲೂಕಿನ ಸವಣಗೇರಿ,ಕಮ್ಮಾಣಿ,ಲಾಲಗುಳಿಯ ಕಗ್ಗಾಡುಗಳಲ್ಲಿಯೂ ಇಂಥಹುದೇ ಜೇನ್ಮರಗಳು ಕಂಡುಬರುತ್ತವೆಯಾದರೂ ಜೇನುಗಳ ಸಂಖ್ಯೆ ಕಡಿಮೆ.

ಈ ಜೇನುಗಳು ಸೇಫ್! ;- ಕಳೆದೊಂದು ದಶಕದೀಚೆಗೆ ಜೇನುಕಂದುಗಳಿಗೆ ಕಳ್ಳರ ಕಾಟ ಹೆಚ್ಚೆಂದೇ ಹೇಳಬೇಕು.ಚಿಕ್ಕಪುಟ್ಟ ಜೇನುಗಳನ್ನೂ ಅವೈಜ್ಞಾನಿಕವಾಗಿ ಕೊಯ್ದು ಸಂಗ್ರಹಿಸುತ್ತಾರೆ.ಆದರೆ ಈ ಮರವನ್ನಾಶ್ರಯಿಸಿದ ಜೇನುಗಳಿಗೆ ಜೀವಭಯವಿಲ್ಲ.ಕಾರಣ,ಮರದ ಏರಲಾಗದ ಎತ್ತರ ಹಾಗೂ ಮರದ ಆಕಾರ.ಉಪಾಯದಿಂದ ಅಕ್ಕ-ಪಕ್ಕದ ಮರವನ್ನೇರಿ ಮುಖ್ಯ ಜೇನು ಮರಕ್ಕೆ ಹಗ್ಗ ಎಸೆದು ಸರ್ಕಸ್ ಮಾಡುವವರೂ ಇಲ್ಲ. ಸುತ್ತಲಿನ ಪ್ರದೇಶಗಳಲ್ಲಿ ಈ ಮರವನ್ನು ದೇವರ ಮರವೆಂದೇ ಕರೆಯಲಾಗುತ್ತದೆ.ಹಾಗಾಗಿ ಎಂಥಹ ಅನುಭವೀ ಜೇನು ಕೊಯ್ಲುದಾರನೂ ಈ ಮರವನ್ನು ಕತ್ತೆತ್ತಿ ನೋಡಿಯಾನೇ ಹೊರತು ಗೂಡಿಗೆ ಕೈ ಹಾಕಲಾರ.ಹಿರಿಯರು ನೆನಪಿಸಿಕೊಳ್ಳುವಂತೆ ಹಿಂದೊಮ್ಮೆ ವ್ಯಕ್ತಿಯೊಬ್ಬ ಈ ಮರವನ್ನೇರಿ ಜೇನು ಕೊಯ್ಯಲು ಪ್ರಯತ್ನಿಸಿದ್ದ.ಇದಕ್ಕಾಗಿ ಆತ ತೆತ್ತ ಬೆಲೆ ಆತನದೇ ಪ್ರಾಣ! ಈ ಎಲ್ಲಾ ಕಾರಣಗಳಿಂದ ಈ ಜೇನುಗಳು ಸೇಫ್! ಇತ್ತೀಚಿನ ದಿನಗಳಲ್ಲಿ ಅರಣ್ಯ ಲಾಖೆ ಗುತ್ತಿಗೆ ಆಧಾರದಲ್ಲಿ ಈ ಜೇನುಗಳ ಕೊಯ್ಲಿಗೆ ಅನುಮತಿ ನೀಡಿದೆ.

        ಹಾಗೆಯೇ ಈ ಮರಕ್ಕೆ ವರ್ಷದ ಎಲ್ಲ ಕಾಲದಲ್ಲಿಯೂ ಜೇನುಗಳ ಆಗಮನವಾಗುವದೂ ಮತ್ತೊಂದು ವಿಶೇಷ.ಹತ್ತಿರವೇ ನೀರಿನ ಲಭ್ಯತೆ,ಅನುಕೂಲಕರವಾದ ವಾತಾವರಣ,ದಟ್ಟ ಕಾಡು ಇವೆಲ್ಲವೂ ಈ ಮರಕ್ಕೆ ಇಷ್ಟೊಂದು ಜೇನುಗಳು ಗೂಡು ಕಟ್ಟಲು ಕಾರಣವೆಂದು ಹೇಳಬಹುದು.ಹಾಗಾಗಿಯೇ ಇಲ್ಲಿ ಪ್ರತೀ ವರ್ಷವೂ ಜೇನುಗಳ ಹಬ್ಬ.ಜೊತೆಗೆ ನೋಡಿ ಆಸ್ವಾದಿಸಿ ಕಣ್ತುಂಬಿಕೊಳ್ಳುವ ಕಂಗಳಿಗೂ !

ಆಹಾ! ಅಪ್ಪೆಮಿಡಿ.


ಊಟವೆಂದಮೇಲೆ ಉಪ್ಪಿನಕಾಯಿ ಇಲ್ಲದಿದ್ದರೆ ಹೇಗೆ ಸ್ವಾಮಿ?! ತಲೆತಲಾಂತರದಿಂದ ನಿತ್ಯದ ಊಟದೊಂದಿಗೆ ವಿಶಿಷ್ಠ ಸ್ಥಾನವನ್ನು ಪಡೆದುಕೊಂಡು ಚಪಲ ನಾಲಗೆಯನ್ನು ತೃಪ್ತಿಪಡಿಸಿ, ಊಟಕ್ಕೆ ಮೆರುಗು ನೀಡುವದೇ ಈ ಉಪ್ಪಿನಕಾಯಿ. ಅದರಲ್ಲೂ ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಪ್ರದೇಶಗಳಲ್ಲಂತೂ ಉಪ್ಪಿನಕಾಯಿ ಇಲ್ಲವೆಂದರೆ ಊಟವೇ ಇಲ್ಲವೆಂಬಂಥ ವಾತಾವರಣ. ಈ ಉಪ್ಪಿನಕಾಯಿಯಲ್ಲಿಯೂ ಥರಾವರಿ ವೆರೈಟಿಗಳಿದ್ದರೂ, ಮಾವಿನಕಾಯಿಯ, ಅದರಲ್ಲೂ ಅಪ್ಪೆಮಿಡಿ ಮಾವಿನ ಉಪ್ಪಿನಕಾಯಿಗೆ ಎಲ್ಲೆಡೆಯಲ್ಲಿಯೂ ಅಗ್ರಸ್ಥಾನ. ಉಪ್ಪಿನಕಾಯಿಗೇಂದೇ ವಿಶೇಷವಾಗಿ ಗುರುತಿಸಲ್ಪಟ್ಟಿರುವ ಅಪ್ಪೆಮಿಡಿ ಹಾಗೂ ಜೀರಿಗೆ ಮಿಡಿ ಮಾವಿನ ಕಾಯಿಗಳ ಸೀಸನ್ ಇನ್ನೇನು ಪ್ರಾರಂಭವಾಗಲಿದ್ದು, ಮಾರುಕಟ್ಟೆಗೆ ದಾಂಗುಡಿಯಿಡಲಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ಸಿದ್ಧಾಪುರ ಮುಂತಾದ ತಾಲೂಕುಗಳ ಗ್ರಾಮೀಣ ಪ್ರದೇಶದಿಂದ ಪಟ್ಟಣದ ಮಾರುಕಟ್ಟೆಗೆ ಮಾರಾಟಕ್ಕೆಂದು ಬರುವ ಈ ಅಪ್ಪೆಮಿಡಿಗಳು ಸುತ್ತ ಸಂಚರಿಸುವ ಸಾರ್ವಜನಿಕರ ಮೂಗಿನ ಹೊಳ್ಳೆಯರಳಿಸುವಂತೆ ಮಾಡಿ ತನ್ನತ್ತ ಸೆಳೆದುಕೊಳ್ಳುತ್ತವೆ.

ರಾಶಿ ರಾಶಿ ಅಪ್ಪೆ ಮಿಡಿ- ಅಪ್ಪೆ ಮಿಡಿ ರಾಶಿ!

       ಅಪ್ಪೆಮಿಡಿ ಉಪ್ಪಿನಕಾಯಿ ತಯಾರಿಕೆಯಲ್ಲಿ ಗುರುತಿಸಿಕೊಳ್ಳಲು ಪ್ರಮುಖ ಕಾರಣ ಅದರ ಸುವಾಸನೆ ಹಾಗೂ ವಿಶಿಷ್ಠ ರುಚಿ. ಸೂಕ್ತವಾಗಿ ಸಂಸ್ಕರಿಸಿ ಭರಣಿಗಳಲ್ಲಿ ಸಂಗ್ರಹಿಸಿ ಇಟ್ಟರೆ ನಾಲ್ಕಾರು ವರ್ಷಗಳವರೆಗೂ ತನ್ನ ವಿಶಿಷ್ಠ ರುಚಿಯನ್ನು ಕಳೆದುಕೊಳ್ಳುವದಿಲ್ಲ. ಅಲ್ಲದೆ, ಕೆಡುವದೂ ಇಲ್ಲ. ಹೊಳೆ, ಹಳ್ಳಗಳ ದಂಡೆಯಲ್ಲಿಯೇ ಹೆಚ್ಚಾಗಿ ಬೆಳೆಯುವ ಮಿಡಿಮಾವಿನ ಮರದ ಸ್ವಭಾವವೂ ತುಸು ವಿಚಿತ್ರವೇ. ಪ್ರತೀವರ್ಷವೂ ಕಾಯಿ ಬಿಡುತ್ತದೆಯೆಂಬ ನಿಯಮವಿಲ್ಲ. ಆದರೆ, ಕಾಯಿ ಬಂತೆಂದರೆ, ಎಲೆಯೂ ಮರೆಯಾಗುವಷ್ಟು ಒತ್ತಾಗಿ ಕಾಯಿ ಬರುತ್ತದೆ. 
       ಹಳ್ಳಿಯಿಂದ ನಗರಕ್ಕೆ :- ಇಂತಿಪ್ಪ ಅಪ್ಪೆಮಿಡಿ ಗ್ರಾಮೀಣ ಪ್ರದೇಶದ ಸಿದ್ದಿ,ಕುಣಬಿ,ಗೌಳಿ ಮುಂತಾದ ಜನಾಂಗದವರ ಕಿರು ಆದಾಯದ ಮೂಲವೂ ಆಗುತ್ತದೆ. ವಾಸಕ್ಕೆ ಕಾಡಿನ ಸನಿಹದ ಜಾಗವನ್ನೇ ಆಯ್ಕೆಮಾಡಿಕೊಳ್ಳುವ ಇವರು ತಮ್ಮ ಸುತ್ತಲಿನ ಕಾಡಿನಲ್ಲಿ ದೊರಕುವ ಮಾವಿನಮಿಡಿಗಳನ್ನು ಕೊಯ್ದು ಸಂಗ್ರಹಿಸಿ ಮಾರಾಟಕ್ಕೆಂದು ಪಟ್ಟಣಕ್ಕೆ ತರುತ್ತಾರೆ. ಹೀಗೆ ಅವರು ಸಂಗ್ರಹಿಸಿ ತಂದ ಹೆಚ್ಚಿನ ಮಿಡಿಗಳನ್ನು ನಗರದಲ್ಲಿರುವ ಮಧ್ಯವತರ್ಿ ಮಾರಾಟಗಾರರು ಸಾರಾಸಗಟಾಗಿ ಖರೀದಿಸುತ್ತಾರೆ. ಇನ್ನೂ ಕೆಲವರು ತಾವೇ ಮಾರುತ್ತಾರೆ. ಯಲ್ಲಾಪುರದ ಮಾರುಕಟ್ಟೆಗೆ ತಾಲೂಕಿನ ಗ್ರಾಮೀಣ ಪ್ರದೇಶಗಳು ಹಾಗೂ ಜಿಲ್ಲೆಯ ಇತರೇ ತಾಲೂಕುಗಳಿಂದಲೂ ಮಾವಿನಮಿಡಿಗಳನ್ನು ತರಿಸಲಾಗುತ್ತದೆ. ತಾಲೂಕಿನ ಹಲವು ವ್ಯಾಪಾರಿಗಳು ಯಲ್ಲಾಪುರ ಹಾಗೂ ಸುತ್ತಲಿನ ತಾಲೂಕುಗಳ ಅಪ್ಪೆಮಿಡಿ ಬೆಳೆಗಾರರಿಂದ ಮಿಡಿಗಳನ್ನು ಕೊಯಿಲು ಮಾಡಿ ಮಾರಲು ಗುತ್ತಿಗೆ ಪಡೆದುಕೊಳ್ಳುತ್ತಾರೆ. ಇಲ್ಲಿ ಬೆಳೆಗಾರರೆಂದರೆ, ಅಡಿಕೆ, ತೆಂಗಿನಂತೆ ತೋಟಗಳಲ್ಲಿ ಬೆಳೆಯುವದೇನಲ್ಲ. ತಮ್ಮ ಮನೆಯ ಸಮೀಪದ ಕಾಡು ಅಥವಾ ತಾವು ಓಡಾಡುವ ಜಾಗದಲ್ಲಿರುವ ಅಪ್ಪೆಮಿಡಿ ಮರಗಳಿಗೆ ಅವರೇ ವಾರಸುದಾರರು! ಅಪ್ಪೆಮಿಡಿ ಕೊಯಿಲು ಕೂಡ ಸುಲಭವೇನಲ್ಲ. ಮಿಡಿಗಳನ್ನು ಕೊಯ್ಯುವಾಗ ಬೀಳಿಸಿದರೆ, ಜಜ್ಜಿ ಹೋದರೆ ಅದರ ಬಾಳಿಕೆ ಕಡಿಮೆಯಾಗುತ್ತದೆ. ಇಂಥಹ ಮಿಡಿಗಳನ್ನು ಸಂಸ್ಕರಿಸಿ ಬಹಳ ದಿನ ಇಡುವಂತೆಯೂ ಇಲ್ಲವಾದ್ದರಿಂದ ಆದಷ್ಟೂ ನಾಜೂಕಾಗಿ ಕೊಯ್ಯಬೇಕಾಗುತ್ತದೆ. ಮರ ಹತ್ತಿ ಮಿಡಿಗಳನ್ನು ಕೊಯ್ದು ಚೀಲದಲ್ಲಿ ಸಂಗ್ರಹಿಸಿ ನಂತರ ಹಗ್ಗದ ಮೂಲಕ ಕೆಳಕ್ಕೆ ತರಲಾಗುತ್ತದೆ ಎಂದು ವಿವರಣೆ ನೀಡುತ್ತಾರೆ ಯಲ್ಲಾಪುರದ ವ್ಯಾಪಾರಿ ಮಹಮದ್ ನಿಸಾರ್.

ಕಡ್ಡಿ ಗೀರಿದರೆ ಹೀಗೆ ಹೊತ್ತಿಕೊಳ್ಳುತ್ತೆ!

       ಅಪ್ಪೆಮಿಡಿ ತೊಟ್ಟು ಸಹಿತವಾಗಿ ಇದ್ದರೆ ಮಾತ್ರ ಬೇಡಿಕೆ ಪಡೆದುಕೊಳ್ಳುತ್ತದೆ. ತೊಟ್ಟಿನ ಭಾಗದಲ್ಲಿ ಸಂಗ್ರಹವಾಗಿರುವ `ಸೊನೆ'ಯೇ ಅದರ ವಿಶಿಷ್ಠ ಪರಿಮಳಕ್ಕೆ ಕಾರಣವಾಗಿದ್ದು, ತೊಟ್ಟು ಮುರಿದಿದ್ದರೆ ಗ್ರಾಹಕರು ಖರೀದಿಸಲು ಬಯಸುವದಿಲ್ಲ. ಎಲ್ಲಿಯೂ ಜಜ್ಜಿಹೋಗಿರಬಾರದು. ಉದ್ದುದ್ದನೆಯ `ಎಸ್' ಆಕಾರದ ಅಪ್ಪೆಮಿಡಿಗಳು ಹೆಚ್ಚಿನ ದರ ಪಡೆದುಕೊಳ್ಳುತ್ತವೆ. ಅಲ್ಲದೆ, ತೊಟ್ಟನ್ನು ಮುರಿದಾಗ ಚಿಮ್ಮುವ ಸೊನೆಗೆ ಬೆಂಕಿ ತಾಕಿಸಿದರೆ, ತಕ್ಷಣವೇ ಮೇಣದಬತ್ತಿಯಂತೆ ಉರಿಯತೊಡಗುತ್ತದೆ. ಅಂಥವುಗಳನ್ನು ಅತ್ಯುತ್ತಮ ದಜರ್ೆಯ ಮಾವಿನಮಿಡಿಗಳೆಂದು ತಿಳಿಯಬಹುದು.
      ಮಾರುಕಟ್ಟೆಯ ವಾತಾವರಣಕ್ಕೆ ತಕ್ಕಂತೆ 80ರಿಂದ 100.ರೂಗಳಿಗೆ 100 ಅಪ್ಪೆಮಿಡಿಗಳನ್ನು ಮಾರಾಟ ಮಾಡಲಾಗುತ್ತದೆ. ಅತ್ಯುತ್ತಮ ದಜರ್ೆಯ ಮಿಡಿಗಳಿಗೆ 100 ಕ್ಕೆ 150.ರೂನಿಂದ 350ರೂಗಳವರೆಗೂ ದರವನ್ನು ಪಡೆದುಕೊಳ್ಳುತ್ತವೆ. ಗ್ರಾಮೀಣ ಪ್ರದೇಶದವರಿಗೆ ಸ್ಥಳೀಯವಾಗಿಯೇ ಅಪ್ಪೆಮಿಡಿಗಳು ಸಿಗುವದರಿಂದ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಖರೀದಿಸುವದಿಲ್ಲ. ಅಲ್ಲೇನಿದ್ದರೂ ಪಟ್ಟಣ ಪ್ರದೇಶದವರೇ ಹೆಚ್ಚಾಗಿ ಖರೀದಿಸುತ್ತಾರೆ. ಮಿಡಿಗಳ ಗುಣಮಟ್ಟದೊಂದಿಗೆ, ಅವುಗಳನ್ನು ಸಂಗ್ರಹಿಸಿಡುವ ರೀತಿಯೂ ಅವುಗಳ ಬಾಳಿಕೆಗೆ ಕಾರಣವಾಗುತ್ತದೆ. ಭರಣಿಯಲ್ಲಿ ತುಂಬುವದಕ್ಕಿಂತ ಮೊದಲು ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಬೇಕು. ಭರಣಿಗೆ ತುಂಬಿಸಿದ ನಂತರ ನೀರು ತಾಕಿಸಬಾರದು. ಇನ್ನೂ ಕೆಲವು ಅಂಶಗಳನ್ನು ಅನುಸರಿಸಿದರೆ,3-4 ವರ್ಷಗಳವರೆಗೂ ಒಂದಿನಿತೂ ಹಾಳಾಗುವದಿಲ್ಲ ಎನ್ನುತ್ತಾರೆ ಮಾವಿನಮಿಡಿ ಖರೀದಿಸಲು ಬಂದ ಮಹಿಳೆಯೊಬ್ಬರು.

 ಅಂದಹಾಗೆ, ಮಾರುಕಟ್ಟೆಯಲ್ಲೇನಾದರೂ ಅಪ್ಪೆಮಿಡಿಯ ಘಮಲು ಮೂಗು ಸವರಿತೆಂದರೆ, ನಾಳೆ ಖರೀದಿಸಿದರಾಯಿತೆಂದು ಬಿಟ್ಟುಬಿಡಬೇಡಿ. ಮತ್ತೆ ಮುಂದಿನ ಸೀಸನ್ವರೆಗೂ ಕಾಯಬೇಕಾದೀತು !