ಆಹಾ! ಅಪ್ಪೆಮಿಡಿ.
ಊಟವೆಂದಮೇಲೆ ಉಪ್ಪಿನಕಾಯಿ ಇಲ್ಲದಿದ್ದರೆ ಹೇಗೆ ಸ್ವಾಮಿ?! ತಲೆತಲಾಂತರದಿಂದ ನಿತ್ಯದ ಊಟದೊಂದಿಗೆ ವಿಶಿಷ್ಠ ಸ್ಥಾನವನ್ನು ಪಡೆದುಕೊಂಡು ಚಪಲ ನಾಲಗೆಯನ್ನು ತೃಪ್ತಿಪಡಿಸಿ, ಊಟಕ್ಕೆ ಮೆರುಗು ನೀಡುವದೇ ಈ ಉಪ್ಪಿನಕಾಯಿ. ಅದರಲ್ಲೂ ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಪ್ರದೇಶಗಳಲ್ಲಂತೂ ಉಪ್ಪಿನಕಾಯಿ ಇಲ್ಲವೆಂದರೆ ಊಟವೇ ಇಲ್ಲವೆಂಬಂಥ ವಾತಾವರಣ. ಈ ಉಪ್ಪಿನಕಾಯಿಯಲ್ಲಿಯೂ ಥರಾವರಿ ವೆರೈಟಿಗಳಿದ್ದರೂ, ಮಾವಿನಕಾಯಿಯ, ಅದರಲ್ಲೂ ಅಪ್ಪೆಮಿಡಿ ಮಾವಿನ ಉಪ್ಪಿನಕಾಯಿಗೆ ಎಲ್ಲೆಡೆಯಲ್ಲಿಯೂ ಅಗ್ರಸ್ಥಾನ. ಉಪ್ಪಿನಕಾಯಿಗೇಂದೇ ವಿಶೇಷವಾಗಿ ಗುರುತಿಸಲ್ಪಟ್ಟಿರುವ ಅಪ್ಪೆಮಿಡಿ ಹಾಗೂ ಜೀರಿಗೆ ಮಿಡಿ ಮಾವಿನ ಕಾಯಿಗಳ ಸೀಸನ್ ಇನ್ನೇನು ಪ್ರಾರಂಭವಾಗಲಿದ್ದು, ಮಾರುಕಟ್ಟೆಗೆ ದಾಂಗುಡಿಯಿಡಲಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ಸಿದ್ಧಾಪುರ ಮುಂತಾದ ತಾಲೂಕುಗಳ ಗ್ರಾಮೀಣ ಪ್ರದೇಶದಿಂದ ಪಟ್ಟಣದ ಮಾರುಕಟ್ಟೆಗೆ ಮಾರಾಟಕ್ಕೆಂದು ಬರುವ ಈ ಅಪ್ಪೆಮಿಡಿಗಳು ಸುತ್ತ ಸಂಚರಿಸುವ ಸಾರ್ವಜನಿಕರ ಮೂಗಿನ ಹೊಳ್ಳೆಯರಳಿಸುವಂತೆ ಮಾಡಿ ತನ್ನತ್ತ ಸೆಳೆದುಕೊಳ್ಳುತ್ತವೆ.
![]() |
ರಾಶಿ ರಾಶಿ ಅಪ್ಪೆ ಮಿಡಿ- ಅಪ್ಪೆ ಮಿಡಿ ರಾಶಿ! |
ಹಳ್ಳಿಯಿಂದ ನಗರಕ್ಕೆ :- ಇಂತಿಪ್ಪ ಅಪ್ಪೆಮಿಡಿ ಗ್ರಾಮೀಣ ಪ್ರದೇಶದ ಸಿದ್ದಿ,ಕುಣಬಿ,ಗೌಳಿ ಮುಂತಾದ ಜನಾಂಗದವರ ಕಿರು ಆದಾಯದ ಮೂಲವೂ ಆಗುತ್ತದೆ. ವಾಸಕ್ಕೆ ಕಾಡಿನ ಸನಿಹದ ಜಾಗವನ್ನೇ ಆಯ್ಕೆಮಾಡಿಕೊಳ್ಳುವ ಇವರು ತಮ್ಮ ಸುತ್ತಲಿನ ಕಾಡಿನಲ್ಲಿ ದೊರಕುವ ಮಾವಿನಮಿಡಿಗಳನ್ನು ಕೊಯ್ದು ಸಂಗ್ರಹಿಸಿ ಮಾರಾಟಕ್ಕೆಂದು ಪಟ್ಟಣಕ್ಕೆ ತರುತ್ತಾರೆ. ಹೀಗೆ ಅವರು ಸಂಗ್ರಹಿಸಿ ತಂದ ಹೆಚ್ಚಿನ ಮಿಡಿಗಳನ್ನು ನಗರದಲ್ಲಿರುವ ಮಧ್ಯವತರ್ಿ ಮಾರಾಟಗಾರರು ಸಾರಾಸಗಟಾಗಿ ಖರೀದಿಸುತ್ತಾರೆ. ಇನ್ನೂ ಕೆಲವರು ತಾವೇ ಮಾರುತ್ತಾರೆ. ಯಲ್ಲಾಪುರದ ಮಾರುಕಟ್ಟೆಗೆ ತಾಲೂಕಿನ ಗ್ರಾಮೀಣ ಪ್ರದೇಶಗಳು ಹಾಗೂ ಜಿಲ್ಲೆಯ ಇತರೇ ತಾಲೂಕುಗಳಿಂದಲೂ ಮಾವಿನಮಿಡಿಗಳನ್ನು ತರಿಸಲಾಗುತ್ತದೆ. ತಾಲೂಕಿನ ಹಲವು ವ್ಯಾಪಾರಿಗಳು ಯಲ್ಲಾಪುರ ಹಾಗೂ ಸುತ್ತಲಿನ ತಾಲೂಕುಗಳ ಅಪ್ಪೆಮಿಡಿ ಬೆಳೆಗಾರರಿಂದ ಮಿಡಿಗಳನ್ನು ಕೊಯಿಲು ಮಾಡಿ ಮಾರಲು ಗುತ್ತಿಗೆ ಪಡೆದುಕೊಳ್ಳುತ್ತಾರೆ. ಇಲ್ಲಿ ಬೆಳೆಗಾರರೆಂದರೆ, ಅಡಿಕೆ, ತೆಂಗಿನಂತೆ ತೋಟಗಳಲ್ಲಿ ಬೆಳೆಯುವದೇನಲ್ಲ. ತಮ್ಮ ಮನೆಯ ಸಮೀಪದ ಕಾಡು ಅಥವಾ ತಾವು ಓಡಾಡುವ ಜಾಗದಲ್ಲಿರುವ ಅಪ್ಪೆಮಿಡಿ ಮರಗಳಿಗೆ ಅವರೇ ವಾರಸುದಾರರು! ಅಪ್ಪೆಮಿಡಿ ಕೊಯಿಲು ಕೂಡ ಸುಲಭವೇನಲ್ಲ. ಮಿಡಿಗಳನ್ನು ಕೊಯ್ಯುವಾಗ ಬೀಳಿಸಿದರೆ, ಜಜ್ಜಿ ಹೋದರೆ ಅದರ ಬಾಳಿಕೆ ಕಡಿಮೆಯಾಗುತ್ತದೆ. ಇಂಥಹ ಮಿಡಿಗಳನ್ನು ಸಂಸ್ಕರಿಸಿ ಬಹಳ ದಿನ ಇಡುವಂತೆಯೂ ಇಲ್ಲವಾದ್ದರಿಂದ ಆದಷ್ಟೂ ನಾಜೂಕಾಗಿ ಕೊಯ್ಯಬೇಕಾಗುತ್ತದೆ. ಮರ ಹತ್ತಿ ಮಿಡಿಗಳನ್ನು ಕೊಯ್ದು ಚೀಲದಲ್ಲಿ ಸಂಗ್ರಹಿಸಿ ನಂತರ ಹಗ್ಗದ ಮೂಲಕ ಕೆಳಕ್ಕೆ ತರಲಾಗುತ್ತದೆ ಎಂದು ವಿವರಣೆ ನೀಡುತ್ತಾರೆ ಯಲ್ಲಾಪುರದ ವ್ಯಾಪಾರಿ ಮಹಮದ್ ನಿಸಾರ್.
![]() |
ಕಡ್ಡಿ ಗೀರಿದರೆ ಹೀಗೆ ಹೊತ್ತಿಕೊಳ್ಳುತ್ತೆ! |
ಮಾರುಕಟ್ಟೆಯ ವಾತಾವರಣಕ್ಕೆ ತಕ್ಕಂತೆ 80ರಿಂದ 100.ರೂಗಳಿಗೆ 100 ಅಪ್ಪೆಮಿಡಿಗಳನ್ನು ಮಾರಾಟ ಮಾಡಲಾಗುತ್ತದೆ. ಅತ್ಯುತ್ತಮ ದಜರ್ೆಯ ಮಿಡಿಗಳಿಗೆ 100 ಕ್ಕೆ 150.ರೂನಿಂದ 350ರೂಗಳವರೆಗೂ ದರವನ್ನು ಪಡೆದುಕೊಳ್ಳುತ್ತವೆ. ಗ್ರಾಮೀಣ ಪ್ರದೇಶದವರಿಗೆ ಸ್ಥಳೀಯವಾಗಿಯೇ ಅಪ್ಪೆಮಿಡಿಗಳು ಸಿಗುವದರಿಂದ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಖರೀದಿಸುವದಿಲ್ಲ. ಅಲ್ಲೇನಿದ್ದರೂ ಪಟ್ಟಣ ಪ್ರದೇಶದವರೇ ಹೆಚ್ಚಾಗಿ ಖರೀದಿಸುತ್ತಾರೆ. ಮಿಡಿಗಳ ಗುಣಮಟ್ಟದೊಂದಿಗೆ, ಅವುಗಳನ್ನು ಸಂಗ್ರಹಿಸಿಡುವ ರೀತಿಯೂ ಅವುಗಳ ಬಾಳಿಕೆಗೆ ಕಾರಣವಾಗುತ್ತದೆ. ಭರಣಿಯಲ್ಲಿ ತುಂಬುವದಕ್ಕಿಂತ ಮೊದಲು ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಬೇಕು. ಭರಣಿಗೆ ತುಂಬಿಸಿದ ನಂತರ ನೀರು ತಾಕಿಸಬಾರದು. ಇನ್ನೂ ಕೆಲವು ಅಂಶಗಳನ್ನು ಅನುಸರಿಸಿದರೆ,3-4 ವರ್ಷಗಳವರೆಗೂ ಒಂದಿನಿತೂ ಹಾಳಾಗುವದಿಲ್ಲ ಎನ್ನುತ್ತಾರೆ ಮಾವಿನಮಿಡಿ ಖರೀದಿಸಲು ಬಂದ ಮಹಿಳೆಯೊಬ್ಬರು.
ಅಂದಹಾಗೆ, ಮಾರುಕಟ್ಟೆಯಲ್ಲೇನಾದರೂ ಅಪ್ಪೆಮಿಡಿಯ ಘಮಲು ಮೂಗು ಸವರಿತೆಂದರೆ, ನಾಳೆ ಖರೀದಿಸಿದರಾಯಿತೆಂದು ಬಿಟ್ಟುಬಿಡಬೇಡಿ. ಮತ್ತೆ ಮುಂದಿನ ಸೀಸನ್ವರೆಗೂ ಕಾಯಬೇಕಾದೀತು !
No comments:
Post a Comment