ಮಳ್ಳಿ ಮಳ್ಳಿ ಮಿಂಚುಳ್ಳಿ.

      ಕೆರೆ ಕಟ್ಟೆಗಳಲ್ಲಿ,ಬಾವಿಗಳಲ್ಲಿ ಅಥವಾ ಹಳ್ಳಗಳ ಬಳಿ ಗಮನಿಸಿ.ನೋಡನೋಡುತ್ತಿದ್ದಂತೆಯೇ ಸುಯ್ಯನೆ ಬಂದ ನೀಲಿ,ಕಂದು ಮಿಶ್ರಣದ ಉದ್ದುದ್ದ ಕೊಕ್ಕಿಹ ಹಕ್ಕಿಯೊಂದು ರಾಕೆಟ್ನಂತೆ ನುಗ್ಗಿ ನೀರಿನಲ್ಲಿರುವ ಮೀನೊಂದನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಪುರ್ರನೆ ಹಾರಿಹೋಗುತ್ತದೆಯಲ್ಲ? ಅದೇ ಕಿಂಗ್ಫಿಷರ್.ಮಳ್ಳಿ ಮಳ್ಳಿಯೆಂದು ನಾವು ಮಿಂಚುಳ್ಳಿಯನ್ನು ಕರೆದರೂ ಅದು ಮಾತ್ರ ಮಳ್ಳಿಯಲ್ಲವೇ ಅಲ್ಲ.ಅದರ ಮೋಹಕ ಮೈಮಾಟ,ಬೇಟೆಯ ವೇಗಗಳನ್ನು ನೋಡಿಯೂ ಹಾಗೆನ್ನಲು ಸಾಧ್ಯವಾ?
         ನಂಬಿ.ಮಿಂಚುಳ್ಳಿಯಲ್ಲಿ 90 ಬಗೆಗಳಿವೆ.ಇವುಗಳನ್ನು ಆಲ್ಸೆಡಿನೀಸ್ ಉಪವರ್ಗಗಳೆಂದು ಪರಿಗಣಿಸಲಾಗಿದೆ.ಹಾಗೆಯೇ ನೀರಿನ ಮಿಂಚುಳ್ಳಿ,ಮರದ ಮಿಂಚುಳ್ಳಿ,ನದಿಯ ಮಿಂಚುಳ್ಳಿ ಎಂದೆಲ್ಲ ವಿಭಾಗಿಸಲಾಗುತ್ತದೆ.ಉದ್ದ ಮತ್ತು ಮೊನಚಾದ ಕೊಕ್ಕು,ದೇಹದ ಅರ್ಧದಷ್ಟಿರುವ ದೊಡ್ಡದಾದ ತಲೆ,ಪುಟ್ಟ ಪುಟ್ಟ ಕಾಲು,ಹೊಳೆಯುವ ಪುಕ್ಕ,ನೀಲಿ-ಹಸಿರು ಬಣ್ಣದ ಮೈ ಇವುಗಳ ವಿಶಿಷ್ಠವೆನಿಸುವ ಲಕ್ಷಣಗಳು.ಹೆಚ್ಚಿನ ಮಿಂಚುಳ್ಳಿಗಳು ಉಷ್ಣವಲಯದಲ್ಲಿ ವಾಸಿಸುತ್ತಾವಾದರೂ ಭಾರತವೂ ಸೇರಿದಂತೆ ಇತರ ಕಾಡುಗಳಲ್ಲಿಯೂ ಕಂಡುಬರುತ್ತವೆ.ಕೆಲ ವಿಧದ ಮಿಂಚುಳ್ಳಿಗಳು ಮರದ ಪೊಟರೆಗಳಲ್ಲಿ ವಾಸಿಸಿದರೆ,ಇನ್ನೂ ಹೆಚ್ಚಿನವು ನೆಲದಲ್ಲಿ ಸುರಂಗ ಕೊರೆದು ಗೂಡು ನಿಮರ್ಿಸಿಕೊಳ್ಳುತ್ತವೆ.
         ಆಫ್ರಿಕಾದ ಕಾಡುಗಳಲ್ಲಿ ಕಂಡುಬರುವ ಡ್ವಾಪರ್್ ತಳಿಯ ಮಿಂಚುಳ್ಳಿಗಳು ಕೇವಲ 10ಸೆಂ.ಮೀ ಉದ್ದವಿದ್ದು ಈ ವರ್ಗದಲ್ಲಿಯೇ ಅತೀ ಚಿಕ್ಕವು ಎನಿಸಿಕೊಂಡಿವೆ.ದೊಡ್ಡ ತಳಿಗಳನ್ನು ಗೇಂಟ್ ಮಿಂಚುಳ್ಳಿಗಳೆಂದು ಗುರುತಿಸಿದ್ದು,ಇವು ಸರಾಸರಿ 45 ಸೆಂ.ಮೀ ಉದ್ದವಿರುತ್ತವೆ ಮತ್ತು ಸಾಮಾನ್ಯ 355ಗ್ರಾಂ. ಭಾರವಿರುತ್ತವೆ.ಷೊವೆಲ್ ಬಿಲ್ಡ್ ಎಂಬ ತಳಿಯ ಮಿಂಚುಳ್ಳಿಗಳು ಅರಣ್ಯದಲ್ಲಿ ನೆಲವನ್ನು ಅಗೆದು ಹುಳ ಹುಪ್ಪಟೆಗಳಂಥಹ ಆಹಾರವನ್ನು ಹುಡುಕುತ್ತವೆ.ಮಿಂಚುಳ್ಳಿಗಳ ಕಣ್ಣುಗಳು ಬೈನಾಕ್ಯುಲರ್ನಷ್ಟು ಸ್ಪಷ್ಟ ಮತ್ತು ದೂರದ ವಸ್ತುಗಳನ್ನೂ ನೋಡುವ ಸಾಮಥ್ರ್ಯ ಹೊಂದಿರುತ್ತದೆ.ಇವುಗಳ ದೃಷ್ಟಿ ಸಾಮಥ್ರ್ಯದ ಬಗ್ಗೆ ಇನ್ನೂ ಹೇಳಬೇಕೆಂದರೆ,ನೀರಿನಲ್ಲಿ ಬೇಟೆಯಾಡುವಾಗ ನೀರಿನಲ್ಲಿ ಬೆಳಕಿನ ವಕ್ರೀಭವನದ ಆಧಾರದ ಮೇಲೆ ನೀರೊಳಗಿನ ಆಳವನ್ನು ನಿಖರವಾಗಿ ಗುರುತಿಸುತ್ತವೆ.ಮಿಂಚುಳ್ಳಿ ಮಿಟುಕಿಸಲು ಸಾಧ್ಯವಾದ ಕಣ್ಣಿನ ಪೊರೆಗಳನ್ನೂ ಹೊಂದಿದ್ದು,ನೀರಿನಲ್ಲಿ ಮುಳುಗುವ ಸಂದರ್ಭದಲ್ಲಿ ಕಣ್ಣುಗಳ ರಕ್ಷಣೆಗಾಗಿ ಪೊರೆಯಿಂದ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತವೆ.
            ಪ್ರಮುಖ ಆಹಾರ ಮೀನುಗಳೇ ಆಗಿದ್ದರೂ ಕೆಲ ಬಗೆಯ ಮಿಂಚುಳ್ಳಿಗಳು ಜೇಡರಹುಳು,ಕಪ್ಪೆ,ಚಿಕ್ಕ ಹಾವುಗಳು,ಕೀಟಗಳು,ಹುಳ-ಹುಪ್ಪಟೆಗಳನ್ನೂ ತಿನ್ನುತ್ತವೆ.ಒಮ್ಮೆಗೆ 2ರಿಂದ 10ರವರೆಗೂ ಮೊಟ್ಟೆಗಳನ್ನು ಇಡುತ್ತವೆ.ಹೊಳೆಯುವ ಬೆಳ್ಳನೆಯ ಮೊಟ್ಟೆಗಳಿಗೆ ಕಾವು ಕೊಡುವ ಸಂದರ್ಭದಲ್ಲಿ ಗಂಡು ಮತ್ತು ಹೆಣ್ಣು ಎರಡೂ ಮಿಂಚುಳ್ಳಿಗಳಿಗೆ ಸಮಪಾಲು.

No comments:

Post a Comment