ಆಮೆ.

        ಟೊಪ್ಪಿಯಾಕಾರದ ಬೆನ್ನು,ಮೋಟು ಮೋಟಾದ ಕಾಲುಗಳು,ಪುಳಕ್ಕನೆ ಒಳಗೆಳೆದುಕೊಳ್ಳುವ ತಲೆ,ಅಪಾಯವನ್ನರಿತು ಕಲ್ಲುಬಂಡೆಯಂತಾಗಿ ವಿಸ್ಮಯ ಮೂಡಿಸುವ ಸರೀಸೃಪ ಆಮೆ.
        ಆಮೆಗಳು ಭೂಮಿಯಲ್ಲಿ ಕಾಣಿಸಿಕೊಂಡು 215ದಶಲಕ್ಷ ವರ್ಷಗಳು ಕಳೆದುಹೋದವು ಎಂದು ಅಭಿಪ್ರಾಯಪಡುತ್ತಾರೆ ಜೀವಶಾಸ್ತ್ರಜ್ಞರು.ಆಮೆಗಳ ವಂಶದಲ್ಲಿಯೇ ಕಡಲಾಮೆಗಳು ಅತ್ಯಂತ ದೊಡ್ಡದಾಗಿ ಬೆಳೆಯುತ್ತವೆ.ಇವು ಪೂರ್ಣಪ್ರಮಾಣದಲ್ಲಿ ಬೆಳೆದಾಗ ಸುಮಾರು 6 ಅಡಿ ಉದ್ದ ಮತ್ತು 900ಕೆ.ಜಿ ಇರುತ್ತವೆ.ಏಷಿಯಾದಲ್ಲಿ ಕಂಡುಬರುವ ಮೃದು ಚಿಪ್ಪನ್ನು ಹೊಂದಿರುವ ಪೆಲೋಚೆಲಿಸ್ ಕ್ಯಾಂಟೋರಿ ಎಂಬ ಆಮೆಗಳು ಇಂಥಹ ಭಾರೀ ದೇಹವನ್ನು ಹೊಂದಿರುತ್ತವೆ.ಅತೀ ಚಿಕ್ಕವೆಂದರೆ,ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುವ ಮೃದು ಪಾದದ ಆಮೆಗಳು.ಇವು 8ಸೆಂ.ಮೀ ಉದ್ದವಿದ್ದು ಸುಮಾರು 1.5 ಕೆ.ಜಿಗಳಷ್ಟು ತೂಗುತ್ತವೆ.ಆಮೆಗಳು ಈ ಭೂಮಿಯ ಮೇಲೆ ಮಾನವನ ವಿಕಾಸವಾಗುವದಕ್ಕೂ ಮೋದಲೇ ಜೀವಿಸಿದ್ದವು.ನಂತರ ಮಾನವ ತನ್ನ ಅಹಾರದ ಉದ್ದೇಶಕ್ಕಾಗಿ ಹಲವು ಜಾತಿಯ ಆಮೆಗಳನ್ನು ಬೇಟೆಯಾಡಿದ ಪರಿಣಾಮವಾಗಿ ಅವುಗಳ ಸಂತತಿಗಳೇ ನಶಿಸಿಹೋದವು ಎಂಬ ಅಭಿಪ್ರಾಯವಿದೆ.
         ಆಮೆಗಳಿಗೆ ಅಪರೂಪವಾದ ರಾತ್ರಿದೃಷ್ಟಿ ಇದೆಯೆಂದು ನಂಬಲಾಗಿದೆ.ಅವುಗಳ ಅಕ್ಷಿಪಟಲದಲ್ಲಿರುವ ಅಸ್ವಾಭಾವಿಕವಾದ ಹಲವಾರು ಕಡ್ಡಿಯಂಥಹ ಕೋಶಗಳು ಇದಕ್ಕೆ ಕಾರಣವೆನ್ನುತ್ತಾರೆಯಾದರೂ ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ.ಆಮೆಯ ಮೈಮೇಲೆ ಇರುವ ಚಿಪ್ಪನ್ನು ಕ್ಯಾರಾಪೇಸ್ ಎಂದು ಕರೆಯಲಾಗುತ್ತದೆ.ಇದು ಎಲುಬಿನಾಕಾರದ ಅಂಚಿನಿಂದ ಕೂಡಿರುತ್ತದೆ.ಬೆನ್ನೆಲುಬು ಮತ್ತು ಪಕ್ಕೆಲುಬುಗಳನ್ನೂ ಸೇರಿ ಸುಮಾರು 60 ಮೂಳೆಯಿಂದ ರಚಿತವಾಗಿದೆ.ಆಮೆಗಳು ಎರಡು ರೀತಿಯಲ್ಲಿ ಉಸಿರಾಡುತ್ತವೆ.ಬಾಯಿಯಿಂದ ಗಾಳಿಯನ್ನು ಎಳೆದುಕೊಂಡು ಗಂಟಲಿನ ಕೆಳಭಾಗದಲ್ಲಿರುವ ಪದರವನ್ನು ಕಂಪಿಸಿ ಪುಪ್ಪುಸಕ್ಕೆ ಎಳೆದುಕೊಳ್ಳುತ್ತವೆ.ಇನ್ನೊಂದು ವಿಧಾನವೆಂದರೆ,ಚಿಪ್ಪಿನ ಹಿಂಭಾಗದಲ್ಲಿರುವ ಬಾಯನ್ನು,ಮುಚ್ಚಿಕೊಂಡಿರುವ ಹೊಟ್ಟೆಯ ಸ್ನಾಯುಗಳನ್ನು ಕಿರಿದುಗೊಳಿಸಿ ಗಾಳಿಯನ್ನು ಎಳೆದುಕೊಳ್ಳುತ್ತವೆ.
        ಆಮೆಗಳು ಆಹಾರವನ್ನು ತುಂಡರಿಸಲು ಮತ್ತು ಅಗಿಯಲು ಬಲಿಷ್ಠ ಮತ್ತು ಮೊನಚಾದ ದವಡೆಗಳನ್ನು ಹೊಂದಿವೆ.ಇನ್ನು,ಮಾಸಾಹಾರಿ ಆಮೆಗಳ ಹಲ್ಲಂತೂ ಚೂರಿಯಂತೆ ಹರಿತವಾಗಿರುತ್ತದೆ.ಇತರ ಸರೀಸೃಪಗಳಂತೆ ಆಮೆಗಳು ಅಹಾರವನ್ನು ಹಿಡಿಯಲು ತಮ್ಮ ನಾಲಿಗೆಯನ್ನು ಹೊರಚಾಚುವದಿಲ್ಲ.ಭೂಮಿಯ ಮೇಲೆ ವಾಸಿಸುವ ಆಮೆಗಳ ಚಿಪ್ಪು ಅತೀ ಭಾರವಾಗಿರುತ್ತದೆ.ಆದರೆ,ನೀರಿನಲ್ಲಿ ವಾಸಿಸುವ ಆಮೆಯ ಚಿಪ್ಪು ಹಗುರವಾಗಿರುತ್ತದೆ ಮತ್ತು ಇದು ವೇಗವಾಗಿ ಈಜಲು,ನೀರಿನಲ್ಲಿ ಮುಳುಗದಂತಿರಲು ಸಹಕಾರಿಯಾಗುತ್ತದೆ.
       ಆಮೆ `ಆಮೆವೇಗ'ಕ್ಕಾಗಿಯೇ ಹೆಸರುವಾಸಿಯಾಗಲು ಇವುಗಳ ಕಾಲಿನ ರಚನೆಯೇ ಕಾರಣವಾಗುತ್ತದೆ.ಕುಬ್ಜವಾದ ಅಷ್ಟೇ ಬಲಿಷ್ಠವಾದ ಕಾಲುಗಳು,ಭಾರವಾದ ಬೆನ್ನ ಮೇಲಿನ ಚಿಪ್ಪು...ಆಮೆ ವೇಗವಾಗಿ ನಡೆಯಲು ಅಸಾಧ್ಯವೇ ಆಗುತ್ತದೆ.ಈಜಬಲ್ಲ ಆಮೆಗಳು ಇದೇ ಕಾಲನ್ನು ಈಜುವ ಸಮಯದಲ್ಲಿ ತಮ್ಮ ಕಾಲನ್ನು ದೋಣಿಯ ಹುಟ್ಟಿನಂತೆ ಬಳಸುತ್ತವೆ.
          

No comments:

Post a Comment