ಕೊವಾಲ ಎಂಬ ಕುಂಭಕರ್ಣ
ನೋಡಲು ಟೆಡ್ಡಿಬೀರ್ನಂತೆ ಗೋಚರಿಸುವ ಕೊವಾಲ ಎಂಬ ಈ ಪ್ರಾಣಿ ದಿನದ 16ರಿಂದ 18 ಘಂಟೆಗಳ ಕಾಲ ನಿದ್ರೆಯಲ್ಲಿಯೇ ಕಳೆಯುತ್ತದೆ! ಫಾಸ್ಕೋಲ್ಯಾಕ್ಟರ್ಿಡೇ ಎಂಬ ಕುಟುಂಬದ ಏಕೈಕ ಸದಸ್ಯನಾಗಿರುವ ಕೊವಾಲ ಆಸ್ಟ್ರೇಲಿಯಾ ದೇಶದಲ್ಲಿ ಮಾತ್ರ ಕಂಡುಬರುತ್ತದೆ. 20ನೆಯ ಶತಮಾನದಲ್ಲಿ ಈ ಪ್ರಾಣಿಗಳನ್ನು ಅತಿಯಾಗಿ ಬೇಟೆಯಾಡುತ್ತಿದ್ದರಿಂದ ಇವುಗಳ ಸಂತತಿ ವಿನಾಶದ ಅಂಚಿನಲ್ಲಿತ್ತು.ಆದರೆ ಪ್ರಸ್ತುತ ಇವುಗಳ ಸಂತತಿಯನ್ನು ಸಂರಕ್ಷಿಸಿ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ.
       ವೊಂಬಾಟ್ ಎಂಬ ಪ್ರಾಣಿಯೊಂದಿಗೆ ಹತ್ತಿರದ ಸಂಬಂಧ ಹೊಂದಿರುವ ಕೊವಾಲಾಗಳು ದಪ್ಪವಾದ ತುಪ್ಪಳ,ಉದ್ದುದ್ದವಾದ ಕೈ-ಕಾಲುಗಳು ಮತ್ತು ದೊಡ್ಡ ಕಿವಿಗಳನ್ನು ಹೊಂದಿವೆ.ಮತ್ತೊಂದು ಅಚ್ಚರಿಯ ಸಂಗತಿಯೆಂದರೆ ಈ ಜೀವಿಯ ಬೆರಳಚ್ಚುಗಳು ಮನುಷ್ಯನ ಬೆರಳಚ್ಚನ್ನೇ ಹೋಲುತ್ತವೆ.ಇವೆರಡರ ನಡುವಿನ ವ್ಯತ್ಯಾಸವನ್ನು ಸೂಕ್ಷ್ಮದರ್ಶಕದಿಂದಲೂ ಕಂಡುಹಿಡಿಯಲು ಸಾಧ್ಯವಿಲ್ಲ! ವಾನರಗಳ ಬೆರಳುಗಳನ್ನು ಹೊರತುಪಡಿಸಿದರೆ ಮನುಷ್ಯನ ಬೆರಳುಗಳೊಂದಿಗೆ ಸಾಮ್ಯತೆ ಹೊಂದಿರುವ ಏಕೈಕ ಪ್ರಾಣಿ ಕೊವಾಲಾ.ಇವು ಉದ್ದ ಮತ್ತು ಚೂಪಾದ ಉಗುರುಗಳನ್ನು ಹೊಂದಿದ್ದು,ಮರವನ್ನೇರಲು ಅನುಕೂಲವಾಗುವಂತಿವೆ.
          ಕೊವಾಲಾಗಳು ಹೆಚ್ಚಾಗಿ ನೀಲಗಿರಿ ಸಸ್ಯದ ಎಲೆಯನ್ನೇ ಸೇವಿಸಿ ಜಿವಿಸುತ್ತವೆ.5ರಿಂದ 14 ಕೆ.ಜಿಗಳವರೆಗೆ ತೂಕವಿರುವ ಇವು ದಿನವೊಂದಕ್ಕೆ ಸರಾಸರಿ ಅರ್ಧ ಕೆ.ಜಿಗಳಷ್ಟು ನೀಲಗಿರಿ ಎಲೆಗಳನ್ನು ತಿನ್ನುತ್ತವೆ.ದಿನದಲ್ಲಿ 16ರಿಂದ18 ಘಂಟೆ ನಿದ್ರೆ ಮತ್ತು 3 ಘಂಟೆಗಳ ಕಾಲ ಆಹರ ಸೇವಿಸುತ್ತ ಕಳೆಯುತ್ತವೆ.ಕೊವಾಲಾಗಳ ಚಯಾಪಚಯ ಕ್ರಿಯೆ ತೀರಾ ನಿಧಾನವಾಗಿರುತ್ತದೆ.ನೀಲಗಿರಿ ಸಸ್ಯದ ಎಲೆಯಿಂದ ದೊರಕುವ ಕಡಿಮೆ ಶಕ್ತಿಯನ್ನು ಇದು ಸಮದೂಗಿಸಿಕೊಳ್ಳುತ್ತದೆ.ಅಲ್ಲದೆ,ನೀಲಗಿರಿ ಎಲೆಯಲ್ಲಿರುವ ವಿಷಯುಕ್ತ ಪದಾರ್ಥಗಳನ್ನು ಬೇರ್ಪಡಿಸಿ ತಮ್ಮ ದೇಹಕ್ಕೆ ಬೇಕಾದ ಪೋಷಕಾಂಸಗಳನ್ನು ಮಾತ್ರ ಪಡೆದುಕೊಳ್ಳುವ ವ್ಯವಸ್ಥೆಯನ್ನೂ ಕೊವಾಲಾಗಳು ಹೊಂದಿವೆ.
       
        ವರ್ಷಕ್ಕೊಂದರಂತೆ 12 ವರ್ಷಗಳ ಕಾಲ ಮರಿ ಇಡುತ್ತವೆ.ಹುಟ್ಟಿದ ಮರಿ ಮನುಷ್ಯರ ಹೆಬ್ಬೆರಳಿನಷ್ಟು ದೊಡ್ಡದಾಗಿರುತ್ತವೆ.ಜನಿಸಿದ ತತ್ಕ್ಷಣದಲ್ಲಿ ತಾಯಿಯ ಹೊಟ್ಟೆಯಲ್ಲಿರುವ ಚೀಲದಂಥಹ ಭಾಗದಲ್ಲಿ ಅವಿತುಬಿಡುತ್ತವೆ.ಆರು ತಿಂಗಳುಗಳ ಕಾಲ ಇಲ್ಲಿಯೇ ಕೇವಲ ಎದೆಹಾಲು ಕುಡಿಯುತ್ತ ಬೆಳೆಯುತ್ತವೆ.ಈ ಸಂದರ್ಭದಲ್ಲಿ ಮರಿಗಳಿಗೆ ಕಿವಿ ಮತ್ತು ಕಣ್ಣುಗಳು ನಿಷ್ಕ್ರಿಯವಾಗಿರುತ್ತವೆ.ಮೈಮೇಲೆ ರೋಮಗಳೂ ಇರುವದಿಲ್ಲ. 6 ತಿಂಗಳು ಕಳೆದ ನಂತರವಷ್ಟೇ ಮೈಮೇಲೆ ರೋಮಗಳು ಬೆಳೆಯುತ್ತವೆ ಮತ್ತು ಕಣ್ಣು ಮತ್ತು ಕಿವಿಗಳು ಕೆಲಸಮಾಡತೊಡಗುತ್ತವೆ.ಮುಂದಿನ ಆರು ತಿಂಗಳುಗಳ ಕಾಲ ತಾಯಿಯ ಜೊತೆಗೇ ಇದ್ದು ನಂತರ ಬೇರ್ಪಟ್ಟು ಜಿವನ ನಡೆಸುತ್ತವೆ.

No comments:

Post a Comment