ಆಸ್ಟ್ರಿಚ್ ಎಂಬ ಪರಾಕ್ರಮಿ.
          ಪಕ್ಷಿ ಸಂಕುಲದಲ್ಲಿರುವ 8,600 ಬಗೆಯ ಪಕ್ಷಿಗಳಲ್ಲಿ ಈ ಆಸ್ಟ್ರಿಚ್ ಪಕ್ಷಿ ಅತೀ ಶಕ್ತಿಶಾಲಿ.ಅಷ್ಟೇ ಅಲ್ಲ.ಗಾತ್ರದಲ್ಲಿಯೂ ಎಲ್ಲರಿಗಿಂತ ಹಿರಿದು.ಇದನ್ನು ಕೇಲವ ಪಕ್ಷಿಯೆಂದು ತಿಳಿದುಕೊಳ್ಳುವ ಹಾಗಿಲ್ಲ.ಕಾರಣ ಇದು ತನಗಿಂತ ಹತ್ತುಪಟ್ಟು ಬಲಶಾಲಿ ಪ್ರಾಣಿಗಳನ್ನೂ ಹೆದರಿಸಬಲ್ಲುದು! ನಿಜ,ಆಸ್ಟ್ರಿಚ್ ಹಾರಲಾರದು.ಇದರ ಬಲವೇನಿದ್ದರೂ ಅದರ ಕಾಲುಗಳಲ್ಲಿ.ಪಕ್ಷಿ ಪ್ರಪಂಚದಲ್ಲಿ ಅತೀ ಭಾರವಾದ ಮತ್ತು ಶಕ್ತಿಶಾಲಿ ಎಂಬ ಬಿರುದು ಪಡೆದಿರುವ ಆಸ್ಟ್ರಿಚ್ ತನ್ನ ಉದ್ದನೆಯ ಕಾಲುಗಳ ಮೂಲಕ ನಿಂತಾಗ ಸುಮಾರು ಎಂಟು ಅಡಿಗಳಷ್ಟು ಎತ್ತರಕ್ಕೆ ಕತ್ತೆತ್ತುತ್ತದೆ.ಚೆನ್ನಾಗಿ ಬೆಳೆದ ಆಸ್ಟ್ರಿಚ್ ಸುಮಾರು 135 ಕೆ.ಜಿಗಳಷ್ಟು ತೂಗುತ್ತದೆ.
        ರಟೀಟ್ ಎಂಬ ಗುಂಪಿಗೆ ಸೇರಿದ ಈ ಪಕ್ಷಿಯ ರೆಕ್ಕೆಗಳು ಅದರ ದೇಹದ ಗಾತ್ರಕ್ಕೆ ಹೋಲಿಸಿದರೆ ತೀರಾ ಚಿಕ್ಕವು.ಅಲ್ಲದೆ,ದೇಹದ ಭಾರ ಕೂಡ ವಿಪರೀತ.ಆದ್ದರಿಂದಲೇ ಆಸ್ಟ್ರಿಚ್ಗೆ ಹಾರಲು ಅಸಾಧ್ಯ.ಆದರೆ,ಇವುಗಳ ಓಟದ ಸಾಮಥ್ರ್ಯ ಮಾತ್ರ ಅಸಾಧಾರಣ.ಘಂಟೆಗೆ 70 ಕಿ.ಮೀ ವೇಗದಲ್ಲಿ ಓಡುವ ಶಕ್ತಿ ಆಸ್ಟ್ರಿಚ್ಗಿದೆ.ಎಷ್ಟು ದೂರ ಕ್ರಮಿಸಿದರೂ ಓಟದ ವೇಗ ತಗ್ಗುವದಿಲ್ಲ.ಓಟದ ವಿಷಯ ಹಾಗಿರಲಿ.ಇವು ಹೆಜ್ಜೆಯಿಡುವದೇ 10ರಿಂದ 15 ಅಡಿ ದೂರಕ್ಕೆ!ಪ್ರತೀ ಪಾದಕ್ಕೆ 2 ಗೊರಸುಗಳನ್ನು ಹೊಂದಿರುವ ಇವಗಳ ಒದೆತ ತುಂಬಾ ಅಪಾಯಕಾರಿ.ರೆಕ್ಕೆಗಳಿದ್ದೂ ಹಾರಲು ಉಪಯೋಗವಾಗದಿದ್ದರೂ ಅವು ತಮ್ಮ ರೆಕ್ಕೆಯಿಂದ ದೇಹದ ಸಮತೋಲನ ಕಾಯ್ದುಕೊಳ್ಳುತ್ತವೆ.ತಮ್ಮ ಭಾವನೆಗಳನ್ನು ಹಾಗೂ ಸಾಂಗತ್ಯ ಬೇಕೆಂಬ ಸೂಚನೆ ನೀಡುವದೂ ರೆಕ್ಕೆಗಳ ಮೂಲಕವೇ.
        ಇವುಗಳ ಮೊಟ್ಟೆ ಸಾಮಾನ್ಯವಾಗಿ 1ರಿಂದ 1.5 ಕೆ.ಜಿಗಳವರೆಗೂ ತೂಗುತ್ತವೆ.3 ವಾರಗಳ ಸಮಯದಲ್ಲಿ ಇವು 8ರಿಂದ 12 ಮೊಟ್ಟೆಗಳನ್ನಿಡುತ್ತವೆ.ಇವುಗಳ ಸಂಸಾರದಲ್ಲಿಯೂ ಸಾಮರಸ್ಯವಿದೆ.ಮೊಟ್ಟೆಗಳಗೆ ಕಾವು ನೀಡಿ ಆರೈಕೆ ಮಾಡುವದು ಕೇವಲ ಹೆಣ್ಣು ಆಸ್ಟ್ರಿಚ್ಗಳ ಕೆಲಸವಲ್ಲ.ಈ ಕಾರ್ಯದಲ್ಲಿ ಗಂಡು ಆಸ್ಟ್ರಿಚ್ಗಳೂ ಸಹಕರಿಸಿ ರಾತ್ರಿ ಸಮಯದಲ್ಲಿ ಮೊಟ್ಟೆಗೆ ಕಾವು ನಿಡುತ್ತವೆ.ಮೊಟ್ಟೆಯೊಡೆದು ಮರಿಯಾದ ನಂತರವೂ ಆರೈಕೆಯಲ್ಲಿ ಇಬ್ಬರಿಗೂ ಸಮಪಾಲು.
        ಇವುಗಳ ಆಯಸ್ಸು 30ರಿಂದ 40 ವರ್ಷ.ಆಹಾರಕ್ಕೆ ಇಂಥದ್ದೇ ಬೇಕೆಂದಿಲ್ಲ.ಸಸ್ಯಾಹಾರ ಹಾಗೂ ಮಾಂಸಾಹಾರ ಎರಡನ್ನೂ ಸೇವಿಸುತ್ತವೆ.ಇನ್ನೂ ಹೇಳಬೇಕೆಂದರೆ,ಕಣ್ಣಿಗೆ ಕಂಡಿದ್ದನ್ನೆಲ್ಲಾ ತಿನ್ನುವ ಸ್ವಭಾವ.ಸೊಪ್ಪು,ಸಸ್ಯದ ಬೇರು,ಬೀಜ,ಚಿಕ್ಕ ಪುಟ್ಟ ಕೀಟಗಳು,ಹಲ್ಲಿ,ಮಿಡತೆಯಂಥಹವು...ಏನಾದರೂ ಸರಿ.ಇವು ತಿಂದ ಆಹಾರ ನೇರ ಹೊಟ್ಟೆ ಸೇರುವದಿಲ್ಲ.ಗಂಟಲಿನ ಬಳಿ ಇರುವ ಚಿಕ್ಕ ಸಂಗ್ರಹ ಚೀಲದಲ್ಲಿ ಶೇಖರಿಸುತ್ತವೆ.ಅಲ್ಲಿ ಚಿಕ್ಕ ಉಂಡೆಗಳಂತೆ ಬದಲಾದ ನಂತರ ಹೊಟ್ಟೆಗೆ ಜಾರಿಸುತ್ತದೆ.ಆಸ್ಟ್ರಿಚ್ಗಳಿಗೆ ನೀರಿನ ಅಗತ್ಯತೆ ಕಡಿಮೆ.ಅಪರೂಪಕ್ಕೆಂಬಂತೆ ನೀರು ಕುಡಿಯುತ್ತವೆ.ಅವು ತಿನ್ನುವ ಸಸ್ಯಗಳಿಂದಲೇ ತಮ್ಮ ದೇಹಕ್ಕೆ ಬೇಕಾದ ನೀರಿನಾಂಶವನ್ನು ಪಡೆದುಕೊಳ್ಳುತ್ತವೆ.
        ಆಫ್ರಿಕಾದ ಮರುಭೂಮಿಗಳಲ್ಲಷ್ಟೇ ವಾಸ ಮಾಡುವ ಆಸ್ಟ್ರಿಚ್ನ ಚರ್ಮ ಹಾಗೂ ಮಾಂಸಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ.ಇದೇ ಕಾರಣಕ್ಕೆ ಇಂದು ಆಸ್ಟ್ರಿಚ್ ಸಾಕಣೆ ಒಂದು ಉದ್ಯಮವಾಗಿಯೂ ಬೆಳೆಯುತ್ತಿದೆ.ಆತಂಕದ ವಿಷಯವೆಂದರೆ,ಇಂಥಹ ಶಕ್ತಿಶಾಲಿ ಪಕ್ಷಿಯ ಸಂಕುಲ ಅವಸಾನದ ಅಂಚಿನಲ್ಲಿದೆ.
         

No comments:

Post a Comment