ಇದೇನೋ ಹೊಸ ಜೀವಿಯಂತಿದೆಯಲ್ಲಾ,ಚಿತ್ತಾಕರ್ಷಕ ಮೈ,ಹೊಳಪು ಬಣ್ಣ,ಮಿನುಗುವ ಮೈ...ಆಹಾ,ಒಮ್ಮೆ ಮುಟ್ಟಿ ನೋಡೋಣ ಎಂದೇನಾದರೂ ನೀವು ಮನಸ್ಸು ಮಾಡಿದಿರೋ, ಮುಗಿಯಿತು.ಜೀವವನ್ನೇ ನುಂಗಿಬಿಡುತ್ತವೆ ಇವು! ಜೆಲ್ಲಿ ಫಿಶ್!ಸಮುದ್ರ ತಳದಲ್ಲಿ ಅತ್ತಿಂದಿತ್ತ ಪಿಟಪಿಟ ಲವಲವಿಕೆಯಿಂದ ಓಡಾಡುತ್ತಿರುವ ಈ ಜೆಲ್ಲಿಫಿಶ್ಗಳು ಚಿಕ್ಕದಾಗಿದ್ದರೂ ಅಷ್ಟೇ ಅಪಾಯಕಾರಿ ಕೂಡ.ಫಿಶ್ ಎಂದ ಮಾತ್ರಕ್ಕೆ ಇವು ಮೀನಿನೊಂದಿಗೆ ಹೋಲಿಸಿದರೆ,ಮೀನಿನಂತೆ ಕಾನುವದೇ ಇಲ್ಲ.ಸ್ನಿಡಾರಿಯನ್ ಎಂಬ ವರ್ಗಕ್ಕೆ ಸೇರಿದ ಇವು ಸ್ಟೌರೋಜೋವಾ,ಕ್ಯೂಬೋಜೋವಾ ಮುಂತಾದ ಅನೇಕ ವರ್ಗಗಳಲ್ಲಿ 100-1500 ಗುಂಪುಗಳಲ್ಲಿ ಗುರುತಿಸಲ್ಪಡುತ್ತವೆ. ಎಲ್ಲ ಸಮುದ್ರಗಳಲ್ಲಿ ಮೇಲ್ಮೈಯಿಂದ ಸಮುದ್ರದ ಆಳದವರೆಗೂ ಕಂಡುಬರುವ ಜೆಲ್ಲಿ ಮಿನುಗಳು ಅಳತೆಯಲ್ಲಿ ತೀರಾ ಚಿಕ್ಕವು.ಬಿಡಿಸಲ್ಪಟ್ಟ ಛತ್ರಿಯಂಥಹ ದೇಹ ರಚನೆ ಹೊಂದಿರುವ ಇವು ಪಾರದರ್ಶಕ ಅಥವಾ ಅರೆಪಾರದರ್ಶಕವಾಗಿಯೂ ಇರುತ್ತವೆ.ಇವುಗಳು ಮೆದುಳು,ಕೇಂದ್ರ ನರ ಮಂಡಲ ವ್ಯವ್ಥೆಯನ್ನೂಹೊಂದಿರುವದಿಲ್ಲ.ಆದರೆ,ಚರ್ಮದ ಹೊರಮೈಯಲ್ಲಿ ಇರುವ ನರಜಾಲದ ಮೂಲಕ ಇತರ ವಸ್ತು,ಪ್ರಾಣಿಗಳ ಸ್ಪರ್ಶವನ್ನು ಗ್ರಹಿಸುತ್ತವೆ.ಇವುಗಳಲ್ಲಿ ಉಸಿರಾಟಕ್ಕೆಂದೇ ಪ್ರತ್ಯೇಕ ಅಂಗವಿಲ್ಲ.ತೆಳುವಾದ ಚರ್ಮವೇ ಆ ಕೆಲಸವನ್ನು ಪೂರೈಸುತ್ತದೆ.ಇತರ ಮೀನುಗಳಿಗಿಂತ ಕಡಿಮೆ ಪ್ರಮಾಣದ ಆಮ್ಲಜನಕದೊಂದಿಗೆ ಜೀವಿಸಬಲ್ಲವು.ಸ್ವಭಾವತಃ ಜೆಲ್ಲಿ ಮೀನುಗಳು ಆಕ್ರಮಣಕಾರೀ ಜಾತಿಯವು.ತಮ್ಮ ಪ್ರದೇಶಕ್ಕೆ ಯಾವುದೇ ಹೊಸ ಜೀವಿ ಪ್ರವೇಶಿಸಿದರೂ ಗುಂಪಾಗಿ ಆಕ್ರಮಣ ನಡೆಸುತ್ತವೆ.ಅಪಾಯದ ಸ್ಥಿತಿಯಲ್ಲಿ ಕುಟುಕುವ ಮೂಲಕ ಎದುರಾಳಿಯನ್ನು ಕಂಗೆಡಿಸುತ್ತವೆ.ಎಲ್ಲ ವರ್ಗದ ಜೆಲ್ಲಿಗಳೂ ಅಪಾಯವನ್ನರಿತು ಎದುರಾಳಿಯನ್ನು ಕುಟುಕುತ್ತವೆ.ಕೆಲ ಜಾತಿಯ ಜೆಲ್ಲಿಗಳ ಕುಟುಕು ತುರಿಕೆ ಹಾಗೂ ಬಾವಿಗೆ ಕಾರಣವಾಗುತ್ತದೆ.ತೀರಾ ಅಸಹನೀಯವಾಗಿರುವ ಇವುಗಳ ಕಚ್ಚುವಿಕೆ ಹಲವುಬಾರಿ ಮಾರಣಾಂತಿಕವಾಗಿರುತ್ತದೆ.ಕ್ಯೂಬೋಜೋವಾ ವರ್ಗಕ್ಕೆ ಸೇರಿದ ಜೆಲ್ಲಿಗಳ ಕುಟುಕು ವಿಷಪೂರಿತವಾಗಿರುತ್ತದೆ.ಅತಿ ಸಂವೇದನಶೀಲತೆಗೆ ಕಾರಣವಾಗುವ ಇವುಗಳ ಕುಟುಕು ಮರಣಕ್ಕೂ ಕಾರಣವಾಗುತ್ತದೆ.ಸಮುದ್ರ ದಂಡೆಯಲ್ಲಿರುವ ಮತ್ತು ಮರಣದಂಚಿನಲ್ಲಿರುವ ಜೆಲ್ಲಿಗಳು ಕೂಡ ಕುಟುಕುತ್ತವೆ.
No comments:
Post a Comment