ನಿಸರ್ಗದ ನೇಗಿಲ ವಿಸ್ಮಯ
     ನಿಸರ್ಗದ ನೇಗಿಲು ಎಂದೇ ಕರೆಯ್ಪಡುವ ಎರೆಹುಳು ಜೀವಜಗತ್ತಿನಲ್ಲೇ ವಿಶಿಷ್ಠವಾದ ಅನೇಕ ವಿಸ್ಮಯಗಳನ್ನು ತನ್ನ ಪುಟ್ಟ ಜೀವದಲ್ಲಿ ಹುದುಗಿಸಿಕೊಂಡಿದೆ.ರೈತ ಮಿತ್ರನಾಗಿರುವ ಎರೆಹುಳು ಉಭಯಲಿಂಗ ಪ್ರಾಣಿ.ಅಂದರೆ,ಗಂಡು ಹಾಗೂ ಹೆನ್ಣು ಜನನಾಂಗಗಳೆರಡೂ ಒಂದೇ ಹುಳುವಿನಲ್ಲಿ ಕಂಡುಬರುತ್ತದೆ.ಹಾಗಾಗಿ ಇವುಗಳಲ್ಲಿ ಗಂಡು-ಹೆಣ್ಣೆಂಬ ಭೇದವಿಲ್ಲ!
      ಇವುಗಳ ದೇಹ ರಚನೆಯೇ ವಿಶಿಷ್ಠ.ಮಾಸಲು ಕೆಂಬಣ್ಣದ ಇದರ ದೇಹ ಹಲವಾರು ಉಂಗುರಗಳನ್ನು ಸಾಲಾಗಿ ಜೋಡಿಸಿದಂತಿರುತ್ತದೆ.ಪೂರ್ತಿಯಾಗಿ ಬೆಳೆದಾಗ 13ರಿಂದ 15 ಸೆಂ.ಮೀ ಉದ್ದವಿರುತ್ತದೆ.ದೇಹದ ಎರಡೂ ಭಾಗ ಒಂದೇ ತೆರನಾಗಿರುತ್ತದೆಯಲ್ಲ,ಸ್ವಲ್ಪ ದಪ್ಪವಿರುವ ತುದಿಯ ಭಾಗವೇ ಬಾಯಿ ಮತ್ತು ಇನ್ನೊಂದು ಭಾಗ ಗುದದ್ವಾರ.ಬಾಯಿಯ ಭಾಗವನ್ನು ಕ್ಲೈಟೆಲಮ್ ಎನ್ನುತ್ತಾರೆ.ಬಾಯಿ ಬದಿಯ ಮೊದಲ ಉಂಗುರ ಸ್ವಲ್ಪ ಕೆಳಕ್ಕೆ ಬಾಗಿರುತ್ತದೆ.ಇದೇ ಎರೆಹುಳುವಿನ ತುಟಿ(ಪ್ರೋಸ್ಟೋಮಿಯಂ).
      ಎರೆಹುಳುವಿಗೆ ಕಣ್ಣು-ಕಿವಿ ಎರಡೂ ಇಲ್ಲ.ಅದರ ಚರ್ಮವೇ ಇವೆರಡರ ಕೆಲಸವನ್ನೂ ನಿರ್ವಹಿಸುತ್ತದೆ.ಶತ್ರುವನ್ನು 8ರಿಂದ 10 ಅಡಿ ದೂರದಿಂದಲೇ ಗುರುತಿಸುವ ಶಕ್ತಿ ಇದಕ್ಕಿದೆ.ಇದರ ಚರ್ಮವೇ ಉಸಿರಾಟದ ಕೆಲಸವನ್ನೂ ಮಾಡುತ್ತದೆ.ಚರ್ಮದಲ್ಲಿರುವ ಸಾವಿರಾರು ಸೂಕ್ಷ್ಮ ರಂಧ್ರಗಳ ಮೂಲಕ ಇಂಗಾಲದ ಡೈ ಆಕೈಡನ್ನು ಹೊರಹಾಕುತ್ತದೆ.ಹಾಗಾಗಿ ಎರೆಹುಳುವಿನ ಮೇಲ್ಮೈ ಸದಾ ತೇವವಾವಿರುತ್ತದೆ.ಮಣ್ಣಿನಲ್ಲಿ ಬಿಲವನ್ನು ಕೊರೆದು ವಾಸಿಸುವ ಇವು ಬಿಲ ಕೊರೆಯುವಾಗ ಸಿಗುವ ಮಣ್ಣನ್ನು ಹಾಗೆಯೇ ನುಂಗಿ ಜೀರ್ಣವಾಗದೇ ಉಳಿದ ಮಣ್ಣನ್ನು ಗುದದ್ವಾರದ ಮೂಲಕ ಮತ್ತೆ ಭೂಮಿಗೆ ರವಾನಿಸುತ್ತವೆ.ಹೀಗೆ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳನ್ನೇ ಆಹಾರವಾಗಿಸಿಕೊಳ್ಳುತ್ತದೆ.ಉಳಿದಂತೆ ಸಸ್ಯಗಳಿಂದ ಉದುರಿದ ಎಲೆಗಳೇ ಎರೆಹುಳುವಿನ ಮುಖ್ಯ ಆಹಾರ.ಎಲೆಗಳ ಮೇಲೆ ಜೊಲ್ಲುರಸವನ್ನು ಸೃವಿಸಿ ಅವು ಕೊಳೆಯುವಂತೆ ಮಾಡಿ ಆಹಾರವನ್ನಾಗಿಸಿಕೊಳ್ಳುತ್ತವೆ.
      ಬಾಯಿಯ ಭಾಗದಿಂದ 14ನೇ ಉಂಗುರದ ತಳದಲ್ಲಿರುವ ರಂಧ್ರ ಸ್ತ್ರೀ ಜನನಾಂಗ ಮತ್ತು 18ನೇ ಉಂಗುರದ ಕೆಳಭಾಗದಲ್ಲಿರುವ ಎರಡು ರಂಧ್ರಗಳು ಪುರುಷ ಜನನಾಂಗ.ಎರಡು ಹುಳುಗಳು ಸೂಕ್ತ ಸಮಯದಲ್ಲಿ ಸಮಾಗಮ ಹೊಂದುತ್ತವೆ.ಈ ಸಂದರ್ಭದಲ್ಲಿ ಒಂದು ಹುಳು ವೀರ್ಯಾಣುಗಳನ್ನು ಸೃವಿಸಿ,ಇನ್ನೊಂದರ ಸ್ತ್ರೀ ಜನನ ದ್ವಾರದಲ್ಲಿ ಸೇರಿಸುವ ಮೂಲಕ ಸಂತಾನೋತ್ಪತ್ತಿ ಕ್ರಿಯೆ ನಡೆಯುತ್ತದೆ.ಗರ್ಭ ಕಟ್ಟಿದ ನಂತರ ಹೆಣ್ಣು ಜನನ ದ್ವಾರದ ಮೂಲಕ ಮೊಟ್ಟೆಗಳು ಹೊರಬರುತ್ತವೆ.
      ಎರೆಹುಳು ತಿಂದು ವಿಸಜಿಸಿದ ಮಣ್ಣು ಉತ್ತಮ ಗೊಬ್ಬರವಾಗುತ್ತದೆ.ಎರೆಹುಳುವಿನ ಶರಿರದಲ್ಲಿರುವ ಅನೇಕ ಲವಣಾಂಶ ಹಾಗೂ ಜೀವಕಣಗಳು ಸಸ್ಯಗಳಿಗೆ ಅಗತ್ಯವಾಗುತ್ತವೆ.ಇದನ್ನು ಕುಪ್ಪಲು ಮಣ್ಣು ಎನ್ನಲಾಗುತ್ತದೆ.ಕಪ್ಪೆ ಮತ್ತು ಹಲವಾರು ಪಕ್ಷಿಗಳು ಎರೆಹುಳುವಿನ ಆಜನ್ಮ ಶತ್ರುಗಳು.ಹಗಲೆಲ್ಲಾ ಗೂಡಿನಲ್ಲಿಯೇ ಇದ್ದು ರಾತ್ರಿ ಸಮಯದಲ್ಲಿ ಆಹಾರವರಸುವದು ಹೆಚ್ಚು.ಪಕ್ಷಿಗಳು ಮಣ್ಣು ಕೆದಕಿ ಎರೆಹುಳುಗಳನ್ನು ಹಿಡಿಯಬಂದರೂ ನುಣುಪಾದ ದೇಹವಿರುವದರಿಂದ ಸುಲಭವಾಗಿ ಜಾರಿ ತಪ್ಪಿಸಿಕೊಳ್ಳುತ್ತವೆ.

No comments:

Post a Comment