ಭಯಂಕರವಾದ ಚಿಮ್ಮಟದಂಥಹ ಎರಡು ಕೈಗಳಿಂದ ಹೋರಾಟಕ್ಕೆ ಸಜ್ಜಾಗಿ ನಿಂತ ಯೋಧನಂತೆ ಗೋಚರಿಸುವ ಏಡಿಗಳು ಪ್ರಪಂಚದ ಎಲ್ಲ ಸಾಗರಗಳಲ್ಲಿ,ಕೆಲವೆಡೆ ಸಿಹಿನೀರಿನ ಆಗರಗಳಲ್ಲಿ,ಉಷ್ಣವಲಯದ ಭೂಭಾಗದಲ್ಲೂ ಕಂಡುಬರುತ್ತವೆ.ಇವುಗಳ ಗಾತ್ರದಲ್ಲಿಯೂ ವೈವಿಧ್ಯತೆಯಿದೆ.ಚಿಕ್ಕ ಬಟಾಣಿ ಕಾಳಿನ ಗಾತ್ರದಿಂದ ಹಿಡಿದು 4 ಅಡಿಯವರೆಗಿನ(ಕಾಲುಗಳನ್ನೂ ಒಳಗೊಂಡು)ಏಡಿಗಳೂ ಇವೆ.ಅತೀ ಹಿಂದಿನ ಅಸಂದಿಗ್ಧ ಏಡಿಯ ಪಳೆಯುಳಿಕೆಗಳು ಜ್ಯುರಾಸಿಕ್ ಕಾಲಕ್ಕೆ ಸೇರಿದವು ಎಂಬ ನಂಬಿಕೆಯಿದೆ.
         ಏಡಿಗಳು ನಡೆಯುವ ಶೈಲಿ ವಿಶಿಷ್ಠವಾದುದು.ಒಂದು ಪಕ್ಕಕ್ಕೆ ವಾಲಿದಂತೆ ನಡೆಯುವ ಏಡಿಗಳ ಇಂಥಹ ಅಭ್ಯಾಸಕ್ಕೆ ಅವುಗಳ ಕಾಲುಗಳ ಕೀಲಿನ ಜೋಡಣೆಯೇ ಕಾರಣವಾಗುತ್ತದೆ.ಮುಂದಕ್ಕೆ ಮತ್ತು ಹಿಂದಕ್ಕೆ ಕೂಡ ನಡೆಯಬಲ್ಲವು.ಪಾರ್ಚರಾನಿಡೇ ಮತ್ತು ಮ್ಯಾಟುಟಿಡೆ ವಂಶಕ್ಕೆ ಸೇರಿದ ಏಡಿಗಳು ಉತ್ತಮ ಈಜುಪಟುಗಳು ಕೂಡ.ಏಡಿಗಳು ಕ್ರಿಯಾಶೀಲ ವ್ಯಕ್ತಿತ್ವದ ಪ್ರಾಣಿಗಳು.ಇವುಗಳ ನಡುವೆಯೇ ಅನೇಕ ವೇಳೆ ಹೋರಾಟಗಳು ನಡೆಯುತ್ತವೆ.ಹೆಣ್ಣು ಏಡಿಗಳ ಸಂಪರ್ಕ ಗಳಿಸಲು ಅಥವಾ ಬಂಡೆಗಳ ಸಂದಿ-ಗೊಂದಿಗಳಲ್ಲಿ ಜಾಗವನ್ನು ಆಕ್ರಮಿಸಲು ಕೂಡ ಹೋರಾಟ ನಡೆಸುತ್ತವೆ.
 ಏಡಿಗಳು ತಮ್ಮ ಚಿಮ್ಮಟದಂಥಹ ಕೈಗಳನ್ನು ರಕ್ಷಣೆಗಾಗಿ,ಬೇಟೆಯಾಡಲು ಮತ್ತು ಸಂಗಾತಿಗಳನ್ನು ಆಕರ್ಷಿಸಲೂ ಬಳಸಿಕೊಳ್ಳುತ್ತವೆ.ಗಂಡು ಮತ್ತು ಹೆಣ್ಣು ಏಡಿಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ಕೈಗಳು ಮತ್ತು ಕಿಬ್ಬೊಟ್ಟೆಯ ಭಾಗ.ಗಂಡು ಏಡಿಗಳ ಕೈ-ಚಿಮ್ಮಟವು ಹಿಗ್ಗಿರುತ್ತದೆ.ಹೆಣ್ಣು ಏಡಿಗಳ ಕಿಬ್ಬೊಟ್ಟೆ ದುಂಡನಾಗಿ ಮತ್ತು ಅಗಲವಾಗಿಯೂ ಇರುತ್ತವೆ.ಇವು ಸರ್ವಾಹಾರಿಗಳು.ಅಂದರೆ,ಆಹಾರಕ್ಕಾಗಿ ಇಂಥದ್ದೇ ಬೇಕೆಂಬ ಕಟ್ಟಳೆಯಿಲ್ಲ.ಪ್ರಮುಖವಾಗಿ ಪಾಚಿಗಳನ್ನು ತಿಂದು ಜೀವಿಸುತ್ತವೆ.ಹುಳುಗಳನ್ನೂ ತಿನ್ನುತ್ತವೆ.ಮೃದ್ವಂಗಿಗಳಾದರೂ ಸರಿ.ಅಥವಾ ಇತರ ಯಾವುದೇ ದಪ್ಪ ಚರ್ಮದ ಜೀವಿಗಳಾದರೂ ಸರಿಯೇ.
         ಏಡಿಗಳು ತಮ್ಮ ಆಹಾರ ಮತ್ತು ಕುಟುಂಬದ ಸಂರಕ್ಷಣೆಗಾಗಿ ಸಂಘಜೀವನ ನಡೆಸುತ್ತವೆ.ಕೂಡುವಿಕೆಯ ಅವಧಿಯಲ್ಲಿ ಹೆಣ್ಣು ಏಡಿ ಅಂಡಾಣುಗಳನ್ನು ಬಿಡುಗಡೆ ಮಾಡಲು ಸೂಕ್ತ ಜಾಗವನ್ನು ಹುಡುಕುವಲ್ಲಿ ಇತರೆಲ್ಲ ಏಡಿಗಳೂ ಸಹಕರಿಸುತ್ತವೆ.ಪ್ರಪಂಚದಾದ್ಯಂತ ಹಲವು ವಿಧಾನಗಳಲ್ಲಿ ಸಂಸ್ಕರಿಸಿ ಏಡಿಗಳನ್ನು ಆಹಾರಕ್ಕಾಗಿ ಬಳಕೆ ಮಾಡಲಾಗುತ್ತಿದೆ.ಕೆಲ ಭಾಗಗಳಲ್ಲಿ ಇಡಿಯಾಗಿಯೇ ಸೇವಿಸಿದರೆ ಇನ್ನು ಕೆಲವೆಡೆ ಮೃದು ಚಿಪ್ಪಿನವುಗಳನ್ನು ಬಳಸುವಾಗ ಅವುಗಳ ಚಿಪ್ಪು ಸಹಿತವಾಗಿ ಸೇವಿಸುತ್ತಾರೆ.ಕರ್ನಾಟಕದಲ್ಲೂ ಕೆಲ ಬುಡಕಟ್ಟು ಜನಾಂಗದವರು ಏಡಿಗಳನ್ನು ಯಾವುದೇ ಸಂಸ್ಕರಣೆಯಿಲ್ಲದೆ ಹಸಿಯಾಗಿಯೇ ತಿನ್ನುತ್ತಾರೆ.
       

No comments:

Post a Comment